ಕೋಟಿ ಆದಾಯ ಗಳಿಸುವ ಕೃಷಿಕ

24myk1a
Published on

ಕೃಷ್ಣಮೂರ್ತಿ ಪಿ.ಎಚ್ ಮಾಯಕೊಂಡ

ವ್ಯವಸ್ಥಿತವಾಗಿ ಹಾಗೂ ವೈಜ್ಞಾನಿಕವಾಗಿ ಕೃಷಿ ಮತ್ತು ತೋಟಗಾರಿಕೆ ಮಾಡಿದರೆ ಲಾಭ ಗಳಿಸಬಹುದು ಎನ್ನುವುದನ್ನು ಮಾಯಕೊಂಡ ಸಮೀಪದ ಹೆದ್ನೇ ಗ್ರಾಮದ ಪ್ರಗತಿಪರ ರೈತ ಪಿ.ಕೆ. ರಾಜೇಂದ್ರ ತೋರಿಸಿಕೊಟ್ಟಿದ್ದಾರೆ.

ಮಾದರಿ ಕೃಷಿಕರಾಗಿರುವ ಪಿ.ಕೆ. ರಾಜೇಂದ್ರ ಅವರು ಬಿಎಸ್ಸಿ ಪದವಿ ಪಡೆದ ಬಳಿಕ ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡು, ಅನೇಕ ಹೊಸ ಬೆಳೆಗಳನ್ನು ಬೆಳೆಯುವ ಮೂಲಕ ಸುತ್ತಮುತ್ತಲಿನ ಗ್ರಾಮಗಳಿಗೆ ಮಾದರಿಯಾಗಿ ಹೊರಹೊಮ್ಮಿದ್ದಾರೆ.

ತಮ್ಮ 60 ಎಕರೆ ಜಮೀನಿನಲ್ಲಿ ಆರಂಭದಲ್ಲಿ ಮೆಕ್ಕೆಜೋಳ, ಸೂರ್ಯಕಾಂತಿ, ಬೆಂಡೆ ಸೇರಿ ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆದು ರಾಜ್ಯ ಬೀಜ ನಿಗಮಕ್ಕೆ ಮಾರಾಟ ಮಾಡುತ್ತಿದ್ದರು. ನಂತರ 2000 ನೇ ಸಾಲಿನಲ್ಲಿ ಜಮೀನಿನಲ್ಲಿ ಬೋರ್ವೆಲ್ ಕೊರೆಸಿ 26 ಎಕರೆಯಲ್ಲಿ 12 ಸಾವಿರಕ್ಕಿಂತ ಹೆಚ್ಚು ಅಡಕೆ ಗಿಡಗಳನ್ನು ನಾಟಿ ಮಾಡಿದರು. 2021 ರಲ್ಲಿ 13 ಎಕರೆಯಲ್ಲಿ ದಾಳಿಂಬೆ ಗಿಡಗಳನ್ನು ಹಾಗೂ 8 ಎಕರೆಯಲ್ಲಿ ತೈವಾನ್ ಪಿಂಕ್ ತಳಿಯ ಪೇರಲ ಗಿಡಗಳನ್ನು ಬೆಳೆದಿದ್ದಾರೆ. 2022 ರಲ್ಲಿ ಮತ್ತೆ 13 ಎಕರೆಯಲ್ಲಿ ಅಡಕೆ ಹಾಕಿದ್ದಾರೆ.

ತೋಟದ ಬದುಗಳಲ್ಲಿ ನೂರಕ್ಕಿಂತ ಹೆಚ್ಚು ತೇಗದ ಮರ, 150 ಹುಣಸೆ ಮರ, 20 ಮಾವಿನ ಮರ, 250 ತೆಂಗಿನ ಮರ, ಬೇವು, ಹೆಬ್ಬೇವು ಮರಗಳು ಭದ್ರಕೋಟೆಯಂತೆ ನಿಂತಿವೆ. ಪ್ರತಿವರ್ಷ ಅಡಕೆ ಸುಲಿದ ಸಿಪ್ಪೆಗೆ ಕೆರೆ ಮಣ್ಣು, ಕೆಂಪು ಮಣ್ಣನ್ನು ಹಾಕಿ ಮಿಶ್ರಣ ಮಾಡಿ ವರ್ಷವಿಡೀ ಕೊಳೆಯಲು ಬಿಟ್ಟು ಉತ್ತಮ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಿ ತೋಟಗಳಿಗೆ ಬಳಸುತ್ತಿದ್ದಾರೆ.

ದಾಳಿಂಬೆ, ಪೇರಲ ಹಣ್ಣಿನ ಗಿಡಗಳ ನಡುವೆ ಸಿಸಿ ಕ್ಯಾಮೆರಾಗಳನ್ನು ಮತ್ತು ತೋಟಗಳ ಸುತ್ತ ತಂತಿ ಬೇಲಿಗಳನ್ನು ಅಳವಡಿಸಲಾಗಿದೆ.

ನೀರು ನಿರ್ವಹಣೆ: ತೋಟದಲ್ಲಿ 120 ಅಡಿ ಅಗಲ, 240 ಉದ್ದ ಮತ್ತು 40 ಅಡಿ ಆಳದ ಹೊಂಡವನ್ನು ನಿರ್ವಿುಸಿ ಅದಕ್ಕೆ ನಾಲ್ಕೈದು ಬೋರ್ವೆಲ್​ಗಳಿಂದ ಬೇಸಿಗೆ ಹಂಗಾಮಿನಲ್ಲಿ ನಿರಂತರವಾಗಿ ನೀರು ತುಂಬಿಸಿ ಹನಿ ನೀರಾವರಿ ಮಾಡಲಾಗುತ್ತದೆ. ಜಮೀನಿನಲ್ಲಿ ಒಟ್ಟು 18 ಕೊಳವೆಬಾವಿಗಳಿದ್ದು ನೀರಿನ ಅಭಾವವಿಲ್ಲ.

ಉತ್ತಮ ಲಾಭ: ಕೊಟ್ಟಿಗೆ ಗೊಬ್ಬರ, ಕೂಲಿ, ಕೀಟನಾಶಕ, ಉಳುಮೆ, ಕಟಾವು, ಮಾರುಕಟ್ಟೆಗೆ ಸಾಗಾಟ ಸೇರಿ ವಾರ್ಷಿಕ ಸರಾಸರಿ 35 ರಿಂದ 40 ಲಕ್ಷ ರೂ. ಖರ್ಚಾಗುತ್ತದೆ. ಆದಾಯ ಒಂದು ಕೋಟಿಗಿಂತ ಹೆಚ್ಚು ಲಭ್ಯವಾಗುತ್ತದೆ ಎನ್ನುತ್ತಾರೆ ರೈತ ಪಿ.ಕೆ. ರಾಜೇಂದ್ರ.

ಪ್ರತಿಯೊಬ್ಬ ರೈತನು ಕೃಷಿ ಜತೆಗೆ ಹೈನುಗಾರಿಕೆ, ಕುರಿ- ಕೋಳಿ ಸಾಕಾಣಿಕೆ ಮಾಡಿದರೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸಿ ಆರ್ಥಿಕವಾಗಿ ಸದೃಢರಾಗಬಹುದು. ಜತೆಗೆ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಉನ್ನತ ಹುದ್ದೆಗೆ ಸೇರಿಸಬಹುದು. | ಪಿ.ಕೆ. ರಾಜೇಂದ್ರ, ಪ್ರಗತಿಪರ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net