

ಕಲಬುರಗಿ: ನಂದಿಕೂರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟನೂರ್ ಡಿ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಒದಗಿಸಬೇಕು ಹಾಗೂ ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಜೈ ಹನುಮಾನ್ ಸೇವಾ ಸಂಘದಿಂದ ಗ್ರಾ.ಪಂ ಅಧ್ಯಕ್ಷರಿಗೆ ಸೋಮವಾರ ಮನವಿಪತ್ರ ಸಲ್ಲಿಸಲಾಯಿತು.
ಕಳೆದ ಕೆಲ ವರ್ಷಗಳಿಂದ ಕೋಟನೂರ್ ಗ್ರಾಮದ ವಿಜಯ ವಿದ್ಯಾಲಯ ಲೇಔಟ್ ಹಾಗೂ ನ್ಯೂ ವೆಂಕಟೇಶ್ ನಗರದಲ್ಲಿ ಸಾಕಷ್ಟು ಅಸ್ತವ್ಯಸ್ತ ಉಂಟಾಗಿದೆ. ಮಳೆ ಬಂದಾಗ ರಸ್ತೆಯ ತುಂಬೆಲ್ಲಾ ನೀರು ನಿಂತು ಸಾರ್ವಜನಿಕರ ಓಡಾಟಕ್ಕೆ ಅಡಚಣೆಯಾಗುತ್ತದೆ. ಅಲ್ಲದೇ ಒಳಚರಂಡಿ ವ್ಯವಸ್ಥೆ ಇಲ್ಲದೇ, ಸುತ್ತಮುತ್ತಲಿನ ಮನೆಗಳಲ್ಲಿ ನೀರು ಹೋಗಿ ಗೊಬ್ಬು ವಾಸನೆ ಬಿರುತ್ತಿದೆ. ಆದಷ್ಟು ಬೇಗ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾಂತ್ ಸೀತನೂರ್ ಅವರು, ಬುಧವಾರ ಅಥವಾ ಗುರುವಾರ ಬಡಾವಣೆಗೆ ಆಗಮಿಸಿ ವೀಕ್ಷಣೆ ಮಾಡುತ್ತೇನೆ. ಪಂಚಾಯತ್ ಅನುದಾನದಲ್ಲಿ ಆಗಬೇಕಾದ ಕೆಲಸವನ್ನು ಶೀಘ್ರದಲ್ಲಿ ಮಾಡುವುದಾಗಿ ಭರವಸೆ ನೀಡಿದರು.
ಗ್ರಾಮ ಪಂಚಾಯತ್ ಸದಸ್ಯ ಶ್ರೀನಿವಾಸ್ ದೊಡ್ಡಮನಿ, ಮುಖಂಡ ದಸ್ತಯ್ಯ ಗುತ್ತೇದಾರ, ಜೈ ಹನುಮಾನ್ ಸೇವಾ ಸಂಘದ ಅಧ್ಯಕ್ಷ ಶಿವಕುಮಾರ್ ಪಾಟೀಲ್, ಖಜಾಂಚಿ ಸುರೇಶ ದೇಶಮುಖ, ಬಡಾವಣೆಯ ನಿವಾಸಿಗಳಾದ ಶ್ರೀಪಾದ್ ಪಾಟೀಲ್, ಕಲ್ಯಾಣಪ್ಪಾ, ಅಶೋಕಕುಮಾರ್, ಶಂಕರಲಿಂಗ್ ಬಿರಾದಾರ್ ಸೇರಿ ಅನೇಕರು ಇದ್ದರು.