

ಹಾವೇರಿ: ಕೋವ್ಯಾಕ್ಸಿನ್ ಲಸಿಕೆ ನೀಡುವ ಕಲ್ಪಿತ ಕಾರ್ಯಾಚರಣೆ ನಗರದ ಜಿಲ್ಲಾಸ್ಪತ್ರೆ ಸೇರಿ ತಾಲೂಕಿನ ಐದು ಆಸ್ಪತ್ರೆಗಳಲ್ಲಿ ಶುಕ್ರವಾರ ನಡೆಯಿತು.
ನಗರದ ಸಾರ್ವಜನಿಕ ಜಿಲ್ಲಾಸ್ಪತ್ರೆ, ಬ್ಯಾಡಗಿ ತಾಲೂಕಾಸ್ಪತ್ರೆ, ಬಂಕಾಪುರ ಸಮುದಾಯ ಆರೋಗ್ಯ ಕೇಂದ್ರ, ಹಾವೇರಿ ತಾಲೂಕು ಕಬ್ಬೂರ ಹಾಗೂ ಸವಣೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ತಾಲೀಮು ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರತಿ ಕೇಂದ್ರದಲ್ಲಿ ನಾಲ್ಕು ಕೊಠಡಿಗಳ ವ್ಯವಸ್ಥೆ ಮಾಡಲಾಗಿತ್ತು. ನೋಂದಾಯಿತ ಸಿಬ್ಬಂದಿಗೆ ಲಸಿಕಾ ಕೇಂದ್ರದ ಹೊರ ಆವರಣದಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ನಂತರ ಸರದಿಯಂತೆ ಲಸಿಕಾ ಕೇಂದ್ರದೊಳಗೆ ಸಿಬ್ಬಂದಿ ಆಗಮಿಸಿ ಲಸಿಕೆ ತೆಗೆದುಕೊಂಡ ನಂತರ ತುರ್ತು ನಿಗಾ ಘಟಕದಲ್ಲಿ 30 ನಿಮಿಷ ಕುಳಿತುಕೊಳ್ಳಲು ತಿಳಿಸಲಾಗಿತ್ತು. ಲಸಿಕೆ ತೆಗೆದುಕೊಂಡ ಯಾವುದೇ ಸಿಬ್ಬಂದಿಗೆ ಯಾವುದಾದರೂ ಅಡ್ಡಪರಿಣಾಮದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ತುರ್ತು ಚಿಕಿತ್ಸೆಗೆ ಆಕ್ಸಿಜನ್ ಸೇರಿ ಎಲ್ಲ ಔಷಧ ಹಾಗೂ ವೈದ್ಯರನ್ನು ಒಳಗೊಂಡ ತಂಡ ಸಿದ್ಧವಾಗಿತ್ತು.
ಡ್ರೖೆ-ರನ್ ಕುರಿತು ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ. ಪರಮೇಶ್ವರ ಹಾವನೂರ ಮಾಹಿತಿ ನೀಡಿ, ವೇಟಿಂಗ್, ನೋಂದಣಿ, ಲಸಿಕೆ ಹಾಗೂ ತುರ್ತು ನಿಗಾ ಘಟಕ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ವ್ಯಾಕ್ಸಿನ್ ಪಡೆಯಲು ಐಡಿಕಾರ್ಡ್ ಕಡ್ಡಾಯವಾಗಿದೆ. ವ್ಯಾಕ್ಸಿನ್ ನೀಡಿದ ನಂತರ 30 ನಿಮಿಷ ನಿಗಾ ಘಟಕದಲ್ಲಿ ಇರಿಸಲಾಗುವುದು. ತುರ್ತು ಚಿಕಿತ್ಸೆಗೆ ಬೇಕಾದ ಅಗತ್ಯ ಸಲಕರಣೆಗಳನ್ನು ಸಂಗ್ರಹಿಸಲಾಗಿದೆ. ಐವರು ಅಧಿಕಾರಿಗಳನ್ನು ಹಾಗೂ ಅಗತ್ಯ ಸಿಬ್ಬಂದಿ ನೇಮಿಸಲಾಗಿದೆ. ಇದರಿಂದ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಲಸಿಕಾ ಕಾರ್ಯಕ್ರಮದ ಪ್ರಾಯೋಗಿಕ ತಿಳಿವಳಿಕೆ ನೀಡಲು ಅನುಕೂಲವಾಗಲಿದೆ ಎಂದರು.
ಜಿಲ್ಲಾಸ್ಪತ್ರೆಯಲ್ಲಿ ವೈದ್ಯರಾದ ಡಾ. ಸುರೇಶ ಪೂಜಾರ, ಡಾ. ನಿರಂಜನ ಬಣಕಾರ ಇತರ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.
ಜಿಲ್ಲೆಯ ಐದು ಕೇಂದ್ರಗಳ ಪೈಕಿ ಪ್ರತಿ ಕೇಂದ್ರದಲ್ಲಿ 25 ಜನ ಆರೋಗ್ಯ ಸಿಬ್ಬಂದಿ ನೋಂದಾಯಿಸಿಕೊಂಡಿದ್ದು, ಕಲ್ಪಿತ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಲಸಿಕೆ ಸಂಗ್ರಹಕ್ಕಾಗಿ ಈಗಾಗಲೇ ಜಿಲ್ಲಾಡಳಿತ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಲಸಿಕೆಗಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಸೇರಿ 6,700 ಫಲಾನುಭವಿಗಳನ್ನು ಗುರುತಿಸಲಾಗಿದ್ದು, 6,712 ಜನ ಈವರೆಗೆ ನೋಂದಾಯಿಸಿಕೊಂಡಿದ್ದಾರೆ.| ಡಾ. ಎಂ. ಜಯಾನಂದ, ಪ್ರಭಾರ ಡಿಎಚ್ಒ