

ಗದಗ: ಕೋವ್ಯಾಕ್ಸಿನ್ಗಿಂತ ಕೋವಿಶೀಲ್ಡ್ ಲಸಿಕೆ ಅತ್ಯುತ್ತಮ ಫಲಿತಾಂಶ ನೀಡಲಿದೆ ಎಂಬ ವಿಷಯ ಆರೋಗ್ಯ ಇಲಾಖೆಯ ಜಿಲ್ಲಾ ವರದಿಯಿಂದ ಗೊತ್ತಾಗಿದೆ. ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಕಡಿಮೆ ಪ್ರಮಾಣದಲ್ಲಿ ಸೋಂಕು ತಗುಲಿದೆ. ಕೋವಿಶೀಲ್ಡ್ ಲಸಿಕೆ ಪಡೆದ 1000 ಜನರಲ್ಲಿ ಕೇವಲ ಇಬ್ಬರಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಕೋವ್ಯಾಕ್ಸಿನ್ ಪಡೆದ 1000 ಜನರ ಪೈಕಿ ಆರು ಮಂದಿಗೆ ಮತ್ತೆ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಒಟ್ಟು ಮೊದಲ ಡೋಸ್ನಲ್ಲಿ ಕೋವಿಶೀಲ್ಡ್ ಲಸಿಕೆಯನ್ನು 1,32,412 ಜನರು ಪಡೆದಿದ್ದಾರೆ. ಇದರಲ್ಲಿ 498 ಜನರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಶೇ. 0.37ರಷ್ಟು (ಪಾಸಿಟಿವಿಟಿ ರೇಟ್) ಜನರಿಗೆ ಸೋಂಕು ತಗುಲಿದಂತಾಗಿದೆ. 18906 ಜನರು ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದಾರೆ. ಇದರಲ್ಲಿ 332 ಜನರಿಗೆ ಸೋಂಕು ಬಂದಿದೆ. ಅಂದರೆ 0.76 ಜನರಲ್ಲಿ ಮತ್ತೆ ಸೋಂಕು ಕಂಡುಬಂದಿದೆ.
ಎರಡನೇ ಡೋಸ್ನಲ್ಲಿ 44903 ಕೋವಿಶೀಲ್ಡ್ ಲಸಿಕೆ ಪಡೆದಿದ್ದು, ಇದರಲ್ಲಿ ಕೇವಲ 44 ಜನರಿಗೆ ಸೋಂಕು ಬಂದಿದೆ. ಸೋಂಕಿನ ಪಾಸಿಟಿವಿಟಿ ರೇಟ್ 0.22ರಷ್ಟಾಗಿದೆ. 8873 ಜನರು ಕೋವ್ಯಾಕ್ಸಿನ್ ಪಡೆದಿದ್ದಾರೆ. ಇದರಲ್ಲಿ 58 ಜನರಿಗೆ ಮತ್ತು ಸೋಂಕು ಕಾಣಿಸಿಕೊಂಡಿದ್ದು, 0.67ರಷ್ಟು ಪಾಸಿಟಿವಿಟಿ ರೇಟ್ ಇದೆ. ಹೀಗಾಗಿ ಎರಡೂ ಡೋಸ್ ಪಡೆದವರ ಪೈಕಿ ಕೋವಿಶೀಲ್ಡ್ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂಬುದು ವರದಿಯಿಂದ ಗೊತ್ತಾಗಿದೆ.
ಕರೊನಾ ಮಹಾಮಾರಿಯ ವಿರುದ್ಧ ರಕ್ಷಿಸಿಕೊಳ್ಳಲು ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳು ರಾಮಬಾಣವಾಗಿವೆ. ಮನುಷ್ಯನ ದೇಹದಲ್ಲಿ ಕನಿಷ್ಟ ಒಂದು ವರ್ಷದವರೆಗೆ ಈ ಲಸಿಕೆ ಅತ್ಯಂತ ಪರಿಣಾಮಕಾರಿ ಕೆಲಸ ಮಾಡಲಿದೆ ಎಂಬ ಸಂಗತಿ ವರದಿ ಬೆಳಕಿಗೆ ಬಂದಿದೆ.
ಆರಂಭದಲ್ಲಿ ಭಯ:
ಗದಗ ನಗರದ ಹೆರಿಗೆ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಮಹಾತ್ಮಗಾಂಧಿ ವೃತ್ತದ ಬಳಿ ಹಳೇ ಜಿಲ್ಲಾಸ್ಪತ್ರೆ, ರೋಣ, ನರಗುಂದ, ಮುಂಡರಗಿ, ಶಿರಹಟ್ಟಿ, ತಾಲೂಕು ಆಸ್ಪತ್ರೆಗಳಲ್ಲಿ (ಜ. 16ರಿಂದ) ಲಸಿಕೆ ನೀಡಲು ಆರಂಭಿಸಲಾಯಿತು. ಆರಂಭದಲ್ಲಿ ಕರೊನಾ ವಾರಿಯರ್ಸ್ ಪೈಕಿ ಮುಂಚೂಣಿ ಕಾರ್ಯಕರ್ತರು (9 ಸಾವಿರ) ಎನಿಸಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಎರಡನೇ ಹಂತದಲ್ಲಿ (ಫೆ. 8ರಂದು) ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆ ಮತ್ತು ಗೃಹ ರಕ್ಷಕ ದಳ ಇಲಾಖೆ ಸಿಬ್ಬಂದಿ ಸೇರಿ ಐದು ಇಲಾಖೆಯ ಸಿಬ್ಬಂದಿಗೆ ಲಸಿಕೆ ಹಾಕುವ ಪ್ರಕ್ರಿಯೆ ಆರಂಭಿಸಲಾಯಿತು.
ಕರೊನಾ ವಾರಿಯರ್ಸ್ ನಂತರ ಜಿಲ್ಲೆಯಲ್ಲಿ 60 ವಯಸ್ಸು ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೀರಿದ ಮತ್ತು ಇನ್ನಿತರ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಲಸಿಕೆ ನೀಡುವ ಕಾರ್ಯ ಜರುಗಿತು. ಸಾರ್ವಜನಿಕರು ಕೋವಿಡ್ 2.0 ಆಪ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಅಥವಾ ನೇರವಾಗಿ ಆಸ್ಪತ್ರೆಗಳಲ್ಲಿ ಹೆಸರು ನೋಂದಾಯಿಸಿ ಲಸಿಕೆ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿತು. ಜಿಲ್ಲೆಯಲ್ಲಿ ಬಹುತೇಕ ಜನರು ನೇರವಾಗಿ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆದರು.
ಲಸಿಕಾಕರಣ ಅಭಿಯಾನ ಆರಂಭಿಸಿದ ಮೊದಲ ಒಂದೆರಡು ವಾರಗಳಲ್ಲಿ ಲಸಿಕೆಗಳ ಬಗ್ಗೆ ಜನರಲ್ಲಿ ಕೊಂಚ ಇತ್ತು. ಲಸಿಕೆ ತೆಗೆದುಕೊಂಡರೆ ತೊಂದರೆ ಆಗುತ್ತದೆಯೋ ಹೇಗೆ ಎಂಬ ಚಿಂತೆ ಇತ್ತು. ದಿನ ಕಳೆದಂತೆ ಭಯ ನಿವಾರಣೆಯಾಗಿ ಲಸಿಕೆಗಾಗಿ ಜನರು ಸರದಿಯಲ್ಲಿ ನಿಲ್ಲುವಂತಹ ವಾತಾವರಣ ಸೃಷ್ಟಿಯಾಯಿತು.
ಕರೊನಾ 2ನೇ ಅಲೆ ಯಾವಾಗ ಶುರುವಾಯಿತೋ ಅಲ್ಲಿಂದ ಲಸಿಕೆಗೆ ಭಾರಿ ಬೇಡಿಕೆ ಹೆಚ್ಚಿತು. 2ನೇ ಅಲೆಯ ಅಬ್ಬರ ಮತ್ತು ಸಾವಿನ ಸಂಖ್ಯೆ ಹೆಚ್ಚಳದಿಂದ ಜನರು ಕಂಗಾಲಾದರು. ಲಸಿಕೆ ಪಡೆದರೆ ಸುರಕ್ಷಿತ ಎಂಬ ಅಭಿಪ್ರಾಯ ಸಾರ್ವತ್ರಿಕವಾದ ನಂತರ ಲಸಿಕಾಕರಣದ ಕೇಂದ್ರ ಜನರಿಂದ ಗಿಜಗೂಡತೊಡಗಿತು.
ಕೋವಿಡ್ ಲಸಿಕೆಯ ಮೂರನೇ ಹಂತದ ಅಭಿಯಾನ ಮೇ 1ರಿಂದ ಆರಂಭಿಸುವುದಾಗಿ ಸರ್ಕಾರ ಘೋಷಿಸಿತ್ತು. ಲಸಿಕೆ ಕೊರತೆ ಇರುವುದರಿಂದ ಜಿಲ್ಲೆಯಲ್ಲಿ 18ರಿಂದ 44 ವರ್ಷ ವಯೋಮಾನದವರಿಗೆ ಲಸಿಕೆ ಹಾಕುವ ಕಾರ್ಯ ನಡೆದಿಲ್ಲ. ಆದರೆ, 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಕಾರ್ಯ ನಡೆದಿದೆ.
ಜನರಲ್ಲಿ ಧೈರ್ಯ ತುಂಬಿದ್ದ ಸಚಿವ ಸಿ.ಸಿ. ಪಾಟೀಲ
ಕರೊನಾ ಲಸಿಕೆ ಅತ್ಯಂತ ಸುರಕ್ಷಿತ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಪಡೆದಿದ್ದಾರೆ. ಹೀಗಾಗಿ ಆತಂಕಕ್ಕೆ ಒಳಗಾಗುವ ಪ್ರಶ್ನೆಯೇ ಇಲ್ಲ. ಎಲ್ಲರೂ ಧೈರ್ಯದಿಂದ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಕುರಿತು ಸಾಕಷ್ಟು ಜನ ಅಪಸ್ವರ ಎತ್ತಿದ್ದರು. ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಆರಂಭದಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು. ನಾನೂ ಸಹ ಲಸಿಕೆ ಹಾಕಿಸಿಕೊಳ್ಳುತ್ತೇನೆ ಎಂದು ಅವರು ಜನರಲ್ಲಿ ಧೈರ್ಯ ತುಂಬಿ ಲಸಿಕಾಕರಣ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದರು.
ಲಸಿಕೆ ಪಡೆಯಲು ಸರತಿ ಸಾಲು
ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕುವ ಕಾರ್ಯ ನಡೆದಿದ್ದು, ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಜನರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ. ಎರಡು ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು. ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಂಡವರು 2ನೇ ಹಂತದ ಲಸಿಕೆ ಪಡೆಯಿರಿ ಎಂದು ಕರೆ ಮಾಡಿ ಮನವಿ ಮಾಡಿದರೂ ಬರುತ್ತಿರಲಿಲ್ಲ. ಆದರೆ, ಇದೀಗ ನಾವು ಯಾರನ್ನೂ ಕರೆಯುತ್ತಿಲ್ಲ. ಆದರೂ ಲಸಿಕೆ ಹಾಕಿಸಿಕೊಳ್ಳಬೇಕು ಎನ್ನುವವರ ಸಂಖ್ಯೆ ಹೆಚ್ಚಿದೆ. ಲಸಿಕೆ ಹಾಕಿಸಿಕೊಳ್ಳಲು ಬೆಳಗ್ಗೆ 9ಕ್ಕೆ ಆಸ್ಪತ್ರೆ ಮುಂದೆ ಸರತಿ ನಿಲ್ಲುತ್ತಿದ್ದಾರೆ ಎಂದು ವೈದ್ಯರು ಹೇಳುತ್ತಾರೆ.
ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳು ಅತ್ಯಂತ ಪರಿಣಾಮಕಾರಿಯಾಗಿದ್ದು, ಎರಡೂ ಅತ್ಯಂತ ಸುರಕ್ಷಿತವಾಗಿವೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಲಸಿಕೆ ಸಂಪೂರ್ಣ ಸುರಕ್ಷಿತ ಎಂಬುದು ಜನರಿಗೆ ಈಗ ಮನದಟ್ಟಾಗಿದೆ.| ಡಾ. ಜಗದೀಶ ನುಚ್ಚಿನಜಿಲ್ಲಾ ಆರೋಗ್ಯ ಸಮೀಕ್ಷಣಾಧಿಕಾರಿ, ಗದಗ