ಕೋವಿಡ್ ವ್ಯಾಕ್ಸಿನ್ ನಮಗ್ಯಾಕ ಬೇಕ್ರಿ...

covishield
Published on

ಹುಬ್ಬಳ್ಳಿ: ‘ಅಯ್ಯೋ... ನನ್ಗ ಕರೊನಾ ಬಂದಿಲ್ಲಾರಿ... ವ್ಯಾಕ್ಸಿನ್ ಯಾಕ್ ತಗೋಬೇಕ್ರಿ... ತಗೊಂಡ್ರ ಮೈಕೈ ನೋವು, ಜ್ವರ ಬರ್ತೇತ್ರಿ... ಲಸಿಕೆ ತಗಂಡವ್ರು ಮೊನ್ನೆ ಹಾರ್ಟ್ ಅಟ್ಯಾಕ್ ಆಗಿ ಸತ್ತಾರಂತ್ರಿ...’

ಹೀಗೆ ತರಹೇವಾರಿಯಾಗಿ ಹರಡಿರುವ ಸುದ್ದಿಗೆ ಕಿವಿಗೊಟ್ಟಿರುವ ಇಲ್ಲಿಯ ಕಿಮ್ಸ್​ನ ಕೆಲ ವೈದ್ಯಕೀಯ ಸಿಬ್ಬಂದಿಯು ಕರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

ವೈದ್ಯರು, ಸ್ನಾತಕೋತ್ತರ ಹಾಗೂ ಸ್ನಾತಕ ವೈದ್ಯಕೀಯ ವಿದ್ಯಾರ್ಥಿಗಳು, ಶುಶ್ರೂಷಾಧಿಕಾರಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ಟೆಕ್ನಿಷಿಯನ್, ಡಿ ಗ್ರುಪ್, ಏಜೆನ್ಸಿ ನೌಕರರು ಸೇರಿ ಒಟ್ಟು 3700 ಜನರು ಕೋವಿಡ್ ಲಸಿಕೆ ಪಡೆಯಲು ಹೆಸರು ನೋಂದಾಯಿಸಿದ್ದಾರೆ. ಅವರಿಗೆಲ್ಲ ಲಸಿಕೆ ಪಡೆಯುವಂತೆ ತರಬೇತಿ ಹಾಗೂ ಕಾರ್ಯಾಗಾರದ ಮೂಲಕ ತಿಳಿವಳಿಕೆ ನೀಡಲಾಗುತ್ತಿದೆ. ಆದರೂ 1134 ಸಿಬ್ಬಂದಿ ಮಾತ್ರ ಲಸಿಕೆ ಪಡೆದಿದ್ದು, ಕೆಲವರು ‘ಕೋವಿಡ್ ಲಸಿಕೆ ನಮಗೆ ಬೇಡವೇ ಬೇಡ’ ಎಂದು ಹಠ ಹಿಡಿದಿದ್ದಾರೆ.

200ಕ್ಕೂ ಹೆಚ್ಚು ವೈದ್ಯರು ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ. ಅವರೆಲ್ಲ ಚೆನ್ನಾಗಿಯೇ ಇದ್ದಾರೆ. ಲಸಿಕೆ ಪಡೆದ ದಿನ ಕೆಲವರಿಗೆ ತಲೆ ತಿರುಗಿದ ಅನುಭವ, ಸಂಕಟ, ಜ್ವರ, ಮೈಕೈ ನೋವು ಬಂದಿದೆ. ಹಾಗಂತ ಅವರಿಗೆ ಇನ್ನೊಂದು ಕಾಯಿಲೆ ತಗಲ್ಹಾಕಿಕೊಂಡಿಲ್ಲ. ಇವರನ್ನೇ ಮಾದರಿಯಾಗಿಟ್ಟುಕೊಳ್ಳಬೇಕಿದ್ದ ಇತರ ಸಿಬ್ಬಂದಿ, ಕೋವಿಡ್ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಅಲ್ಲದೆ, ‘ನನಗೆ ಕರೊನಾ ಬಂದಿಲ್ಲ, ಯಾಕೆ ಕೋವಿಡ್ ಲಸಿಕೆ ತೆಗೆದುಕೊಳ್ಳಲಿ’ ಎಂದು ವೈದ್ಯರ ಮುಂದೆ ಕೆಲವರು ಪ್ರಶ್ನೆ ಎಸೆಯುತ್ತಿದ್ದಾರೆ.

ಸಲಹೆ ನೀಡಿದ್ದ ಡಾ. ಸಿ.ಎನ್. ಮಂಜುನಾಥ

ಕರೊನಾ ವಾರಿಯರ್​ಗಳು ಕೋವಿಡ್ ಲಸಿಕೆ ಪಡೆಯಲು ಮುಂದೆ ಬಾರದಿದ್ದರೆ ಹೇಗೆ? ಕಿಮ್ಸ್​ನಲ್ಲಿ ಶೇ. 30ರಷ್ಟು ವೈದ್ಯಕೀಯ ಸಿಬ್ಬಂದಿ ಲಸಿಕೆ ಪಡೆದಿದ್ದಾರೆ. ಲಸಿಕೆಯಿಂದ ಯಾವುದೇ ತೊಂದರೆ ಇಲ್ಲ. ಆತಂಕ ಬಿಟ್ಟು ಲಸಿಕೆ ಪಡೆಯಬೇಕು ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ ಅವರು ಇತ್ತೀಚೆಗೆ ಆಯೋಜಿಸಿದ್ದ ಕಿಮ್್ಸ ಘಟಿಕೋತ್ಸವದಲ್ಲಿ ಸಲಹೆ ನೀಡಿದ್ದರು.

ಎಣ್ಣೆ ಹೊಡೆಯಲು ತ್ರಾಸು...

ಕೋವಿಶೀಲ್ಡ್ ಲಸಿಕೆ ಪಡೆದ ಕೆಲವು ದಿನಗಳವರೆಗೆ ಮದ್ಯ ಸೇವನೆಗೆ ನಿರ್ಬಂಧವಿದೆ. ಇದನ್ನೇ ನೆಪವಾಗಿಟ್ಟುಕೊಂಡಿರುವ ಕೆಳ ಹಂತದ ವೈದ್ಯಕೀಯ ಸಿಬ್ಬಂದಿಯು ಕೋವಿಶೀಲ್ಡ್ ಡೋಸ್ ಪಡೆಯಲು ಒಲ್ಲೆ ಎನ್ನುತ್ತಿದ್ದಾರೆ. ಯಾಕೆಂದರೆ ಕೆಲವರು ನಿತ್ಯ ಮದ್ಯ ಸೇವನೆ ಮಾಡುತ್ತಾರೆ. ಎಣ್ಣೆ ಹೊಡೆಯೋದು ತಪ್ಪಿದರೆ ಹೇಗೆಂಬ ಭಯ ಅವರನ್ನು ಆವರಿಸಿದೆ. ಮೊದಲು ಆರೋಗ್ಯ ಸುಧಾರಿಸಿಕೊಳ್ಳಬೇಕು. ನಂತರ ಮದ್ಯ ಕುಡಿಯುವುದು-ಬಿಡುವುದು ನಿಮಗೆ ಬಿಟ್ಟಿದ್ದು ಎಂದು ವೈದ್ಯರು ತಿಳಿ ಹೇಳಿದರೂ ಕೆಲವರು ಸೊಪ್ಪು ಹಾಕುತ್ತಿಲ್ಲವಂತೆ.

ಶೇ. 95ರಷ್ಟು ವೈದ್ಯರು ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡಿದ್ದಾರೆ. ಗ್ರುಪ್ ‘ಸಿ’ ಮತ್ತು ‘ಡಿ’ ನೌಕರರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಅವರ ಆತಂಕ ನಿವಾರಿಸಲು ಜಾಗೃತಿ ಮೂಡಿಸಲಾಗುತ್ತಿದೆ.| ಡಾ. ರಾಮಲಿಂಗಪ್ಪ ಅಂಟರತಾನಿ ಕಿಮ್್ಸ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net