ಕೋವಿಡ್ ಲಸಿಕೆ ಜಾಥಾಕ್ಕೆ ಚಾಲನೆ

h14-Rally
Published on

ಹುಬ್ಬಳ್ಳಿ: ಇಲ್ಲಿಯ ವಿಮಾನ ನಿಲ್ದಾಣ ಬಳಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠದಿಂದ ಸೋಮವಾರ ಏರ್ಪಡಿಸಿದ್ದ ‘ಸಾಮೂಹಿಕ ವ್ಯಾಕ್ಸಿನೇಶನ್ ಪ್ರಯೋಗ ಕಾರ್ಯಕ್ರಮ’ ಉಚಿತ ಕೋವಿಡ್ ಲಸಿಕೆ ಜಾಥಾಕ್ಕೆ ಶಾಸಕ ಹಾಗೂ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಅರವಿಂದ ಬೆಲ್ಲದ ಚಾಲನೆ ನೀಡಿದರು.

ನಗರದ ವಿಮಾನ ನಿಲ್ದಾಣದಿಂದ ಜಾಥಾ ಹೊರಟು ಬೆಳಗಾವಿವರೆಗೆ ನಡೆಯಲಿದೆ. ಅಲ್ಲಿ ನಿತ್ಯ 25 ಜನರಿಗೆ ಉಚಿತ ಕೋವಿಡ್ ವ್ಯಾಕ್ಸಿನೇಶನ್ ಮಾಡಲಾಗುತ್ತದೆ. ಈಗಾಗಲೇ ನಗರದ ಕೆಲವರು ಚುಚ್ಚುಮದ್ದು ಪಡೆದು ಬಂದಿದ್ದಾರೆ ಎಂದು ಸಂಘಟಕರು ತಿಳಿಸಿದರು.

ಧಾರವಾಡ ಜಿಲ್ಲೆಯ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ. ಎಂ.ಜೆ. ಜೀವಣ್ಣವರ, ಸಹಸಂಚಾಲಕ ಡಾ. ವಿವೇಕ ಪಾಟೀಲ, ಡಾ. ಉದಯ ಸಜ್ಜನರ, ಡಾ. ಅಪೂರ್ವ, ಹಿಮಾಂಶು ಕೊಠಾರಿ, ಮಾನಸಿ ಕೊಠಾರಿ, ಶ್ರೀನಿವಾಸ, ಪಿ. ಹುಟಗಿಕರ, ರವಿ ನಾಯ್ಕ ಇತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಏನಿದು ಕಾರ್ಯಕ್ರಮ: ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಮತ್ತು ಧಾರವಾಡ ಜಿಲ್ಲಾ ಘಟಕದ ಸಹಯೋಗದೊಂದಿಗೆ ಬೆಳಗಾವಿಯ ಜೀವನ ರೇಖಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ (ಕೋವ್ಯಾಕ್ಸಿನ್) ಹಂತ- 3 ಪ್ರಯೋಗಾರ್ಥ ಕಾರ್ಯಕ್ರಮ ಇದಾಗಿದೆ.

ಐಸಿಎಂಆರ್ ಸಹಯೋಗದೊಂದಿಗೆ ಭಾರತದ ಬಯೋಟೆಕ್ ಇಂಟರ್​ನ್ಯಾಷನಲ್ ಅಡಿಯಲ್ಲಿ ದೇಶದ ಅತಿ ದೊಡ್ಡ ಸಾಮೂಹಿಕ ವ್ಯಾಕ್ಸಿನೇಶನ್ ಪ್ರಯೋಗ ಮಾಡಲಾಗುತ್ತಿದೆ. ದೇಶಾದ್ಯಂತ ಸುಮಾರು 25800 ಸ್ವಯಂ ಸೇವಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ದೇಶದ 25 ಕೇಂದ್ರಗಳಲ್ಲಿ ಬೆಳಗಾವಿಯ ಜೀವನ ರೇಖಾ ಆಸ್ಪತ್ರೆ ಒಂದಾಗಿದ್ದು, ಅಲ್ಲಿಯ 1000ದಷ್ಟು ಸ್ವಯಂ ಸೇವಕರಿಗೆ ಸಂಪೂರ್ಣ ವೈರಾಣು ನಿಷ್ಕ್ರಿಯಗೊಳಿಸಿದ ಸಾರ್ಸ್ ಕೋವಾ-2 ಲಸಿಕೆ ನೀಡಲಾಗುತ್ತಿದೆ. ಸಾರ್ವಜನಿಕರು ತಮ್ಮ ಕುಟುಂಬದವರು, ಸ್ನೇಹಿತರು, ಸಹದ್ಯೋಗಿಗಳನ್ನು ಕಳುಹಿಸಬಹುದಾಗಿದೆ.

ಲಸಿಕೆ ನೀಡುವ ಮೊದಲು ರಕ್ತದ ಮಾದರಿ ಸಂಗ್ರಹಿಸಲಾಗುತ್ತದೆ. 28 ದಿನಗಳ ನಂತರ ಮತ್ತೆ ಪರೀಕ್ಷೆ ನಡೆಸಿ ಚುಚ್ಚುಮದ್ದಿನ ಪರಿಣಾಮ ತಿಳಿದುಕೊಳ್ಳಲಾಗುತ್ತದೆ. ಈ ಪ್ರಯೋಗದ ನಂತರ ಲಸಿಕೆಯನ್ನು ದೇಶದ ಜನರಿಗೆ ಬಿಡುಗಡೆ ಮಾಡಲಾಗುತ್ತದೆ. ಇದು ಬಿಜೆಪಿಯ ಅತ್ಯುತ್ತಮ ಸಾಮಾಜಿಕ ಸೇವೆಯಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಲು ಸಂಘಟಕರು ಮನವಿ ಮಾಡಿದರು.

ಪಡೆದವರ ಅನಿಸಿಕೆ: ನಗರದ ವಿ ಕೇರ್ ಆಸ್ಪತ್ರೆಯ 9 ಸಿಬ್ಬಂದಿ ಭಾನುವಾರ ಬೆಳಗಾವಿಗೆ ತೆರಳಿ ವ್ಯಾಕ್ಸಿನೇಶನ್​ಗೆ ಒಳಗಾಗಿ ಬಂದಿದ್ದು, ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು. ವ್ಯಾಕ್ಸಿನೇಶನ್ ಪಡೆದ ಬಳಿಕ ನಮಗೆ ಯಾವುದೇ ತೊಂದರೆ ಆಗಿಲ್ಲ. ಅಡ್ಡಪರಿಣಾಮಗಳೂ ಗೋಚರಿಸಿಲ್ಲ. ಎಂದಿನಂತೆ ಸಾಮಾನ್ಯ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ ಎಂದು ಉದಯಕುಮಾರ ಬ್ಯಾಹಟ್ಟಿ, ಮಹೇಶ ಎಂ.ಜಿ., ಕಿರಣ ಬಡಿಗೇರ, ಸುಮಿತ ಭಂಡಾರೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net