

ಹುಬ್ಬಳ್ಳಿ: 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕಾಕರಣ ಅಭಿಯಾನ ಶುರುವಾಗುತ್ತಿದ್ದಂತೆ ಗದ್ದಲ-ಘರ್ಷಣೆ ಜೋರಾಗಿದೆ. ಜನರು 4-5 ತಾಸು ಸರತಿ ಸಾಲಿನಲ್ಲಿ ನಿಂತು ಹೈರಾಣಾಗುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದ 67 ವಾರ್ಡ್ಗಳಲ್ಲಿ ಜೂ. 21ರಂದು ಲಸಿಕಾಕರಣಕ್ಕೆ ಕೇಂದ್ರಗಳನ್ನು ತೆರೆಯಲಾಗಿದೆ. ಆರಂಭದ ದಿನ 27,600 ಜನರಿಗೆ ಕೋವಿಡ್ ಲಸಿಕೆ ಹಾಕಲಾಯಿತು. ನಂತರದ ದಿನಗಳಲ್ಲಿ ಯುವ ಜನತೆ ಕೇಂದ್ರಗಳತ್ತ ಧಾವಿಸುತ್ತಿದ್ದು, ಕೆಲ ಕೇಂದ್ರಗಳಲ್ಲಿ ಮಧ್ಯಾಹ್ನದ ವೇಳೆಗಾಗಲೇ ವ್ಯಾಕ್ಸಿನ್ ವೈಯಲ್ಸ್ ಮುಗಿಯುತ್ತಿವೆ. ಇದರಿಂದ ಬಹಳಷ್ಟು ಕಡೆ ಆರೋಗ್ಯ ಇಲಾಖೆ ಸಿಬ್ಬಂದಿ ಜತೆಗೆ ಜನರಿಂದ ವಾಗ್ವಾದಗಳು ನಡೆಯುತ್ತಿವೆ.
ಬೇಡಿಕೆಗೆ ತಕ್ಕಂತೆ ಧಾರವಾಡ ಜಿಲ್ಲೆಗೆ ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯವಾಗುತ್ತಿಲ್ಲ. ಅದೂ ಆದ್ಯತೆ (ಪ್ರಿಯಾರಿಟಿ) ಹಾಗೂ ದುರ್ಬಲ ವರ್ಗದವರಿಗೆ ಲಸಿಕೆ ಹಾಕಬೇಕೆಂಬ ಸೂಚನೆ ಇದೆ. 18 ವಯಸ್ಸು ಮೇಲ್ಪಟ್ಟವರೆಲ್ಲ ಬಂದು ಕೇಂದ್ರದ ಮುಂದೆ ನಿಲ್ಲುತ್ತಿದ್ದಾರೆ. ಇದರ ಮಧ್ಯೆ ಎರಡನೇ ಡೋಸ್ ಪಡೆಯುವವರು ಹಾಗೂ 45 ವರ್ಷ ಮೇಲ್ಪಟ್ಟವರೂ ಬಂದು ಸೇರುತ್ತಿದ್ದು, ಅವರಿಗೆ ಪ್ರತ್ಯೇಕ ಸಾಲುಗಳನ್ನು ಮಾಡಲಾಗುತ್ತಿದೆ. ಇದರಿಂದ ಬಹಳಷ್ಟು ಕಡೆ ಜನಜಂಗುಳಿ ಕಂಡುಬರುತ್ತಿದೆ.
ಶನಿವಾರ 13 ಸಾವಿರ ಡೋಸ್ ಕೋವಿಶೀಲ್ಡ್ ಬಂದಿತ್ತು. ಅದನ್ನು ಎಲ್ಲ ಕೇಂದ್ರಗಳಿಗೆ ಹಂಚಲಾಗಿದೆ. ಸದ್ಯ ಇನ್ನೂ 8 ಸಾವಿರ ಡೋಸ್ ಇದೆ. ಭಾನುವಾರ ಮತ್ತಷ್ಟು ಲಸಿಕೆ ಬರುವ ಸಾಧ್ಯತೆ ಇದೆ. ಆದರೆ, ಬರುವ ಡೋಸ್ಗಳು ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಜನರಿಗೆ ಸಾಲುತ್ತಿಲ್ಲ ಎಂಬ ಆರೋಪವೂ ಇದೆ. ಹಾಗಾಗಿ ರಾಜ್ಯ ಸರ್ಕಾರವು ಬಹಳಷ್ಟು ಡೋಸ್ಗಳನ್ನು ಧಾರವಾಡ ಜಿಲ್ಲೆಗೆ ಕಳುಹಿಸಿಕೊಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಧಾರವಾಡದಲ್ಲಿ ನೂಕುನುಗ್ಗಲು
ಆರೋಗ್ಯ ಇಲಾಖೆ ಸಿಬ್ಬಂದಿ ಯಡವಟ್ಟಿನಿಂದ ಧಾರವಾಡ ಜಿಲ್ಲಾ ಆಸ್ಪತ್ರೆ ಲಸಿಕಾ ಕೇಂದ್ರದಲ್ಲಿ ನೂಕುನುಗ್ಗಲು ಉಂಟಾದ ಘಟನೆ ಶನಿವಾರ ನಡೆದಿದೆ. ಅಲ್ಲಿನ ಸಿಬ್ಬಂದಿ ಕೇವಲ 50 ಜನರಿಗೆ, ಅದೂ 2ನೇ ಡೋಸ್ನವರಿಗೆ ಲಸಿಕೆ ನೀಡುವುದಾಗಿ ಹೇಳಿದ್ದರಿಂದ ನೂರಾರು ಜನರು ಕೇಂದ್ರಕ್ಕೆ ಮುಗಿಬಿದ್ದಿದ್ದರು. ಇದರಿಂದ ಕೆಲ ಹೊತ್ತು ಕೇಂದ್ರದ ಬಾಗಿಲು ಹಾಕಲಾಗಿತ್ತು. ಕೂಡಲೆ, ಮಧ್ಯ ಪ್ರವೇಶಿಸಿದ ಪೊಲೀಸರು ಜನದಟ್ಟಣೆ ನಿಯಂತ್ರಿಸಿದರು. ನಿರಾಸೆಗೊಂಡ ಕೆಲ ಜನರು ಕೇಂದ್ರದಿಂದ ಮರಳಿದರು. ಇಷ್ಟೆಲ್ಲ ಅವಾಂತರದ ಬಳಿಕ ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ ತಲಾ 500 ಡೋಸ್ ಲಸಿಕೆಗಳನ್ನು ಕೇಂದ್ರಕ್ಕೆ ತರಲಾಯಿತು. ನಂತರ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಕುಮಾರ ಮಾನಕರ್ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಶನಿವಾರ ಹಾಗೂ ಭಾನುವಾರ ರಜೆ ಇರುವ ಕಾರಣಕ್ಕೆ ಜನದಟ್ಟಣೆ ಉಂಟಾಗಿದೆ. ಕೇಂದ್ರಕ್ಕೆ ಆಗಮಿಸಿದ ಜನರ ಮಾಹಿತಿ ಪಡೆಯಲಾಗಿದೆ. ಲಸಿಕೆಗಳೂ ಬಂದಿವೆ. ಹೀಗಾಗಿ ಇಂದು ಕೇಂದ್ರಕ್ಕೆ ಬಂದಿರುವ ಎಲ್ಲ ಜನರಿಗೆ ಲಸಿಕೆ ನೀಡಲಾಗುವುದು ಎಂದರು.
ಎಲ್ಲರಿಗೂ ಲಸಿಕಾಕರಣ ಮಾಡಲಾಗುವುದು. ಬಂದ ಡೋಸ್ಗಳನ್ನು ಕೇಂದ್ರಗಳಿಗೆ ರವಾನಿಸಲಾಗುತ್ತಿದೆ. 18 ವಯಸ್ಸು ಮೇಲ್ಪಟ್ಟವರಲ್ಲಿ ಆದ್ಯತೆ(ಪ್ರಿಯಾರಿಟಿ) ಹಾಗೂ ದುರ್ಬಲ ವರ್ಗದವರಿಗೆ ಮೊದಲು ಲಸಿಕೆ ನೀಡಲಾಗುತ್ತಿದೆ. ಯಾರೂ ಗದ್ದಲ ಮಾಡಬಾರದು.| ಡಾ.ಎಸ್.ಎಂ. ಹೊನಕೇರಿಲಸಿಕೆ ವಿತರಣೆಯ ಜಿಲ್ಲಾ ನೋಡಲ್ ಅಧಿಕಾರಿ