

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕರೊನಾ ಸೋಂಕಿನ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದ್ದು, ಕಿಮ್್ಸ ಸೇರಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರದ ನಿರ್ದೇಶನದಂತೆ ಖಾಸಗಿ ಆಸ್ಪತ್ರೆಗಳು ಶೇ. 50ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಬೇಕು. ಅಂಥ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಡಳಿತದಿಂದ ಅಗತ್ಯ ಸಹಾಯ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಹುಬ್ಬಳ್ಳಿಯ ಬೈಲಪ್ಪನವರ ನಗರದಲ್ಲಿರುವ ಐಎಂಎ ಸಭಾಂಗಣದಲ್ಲಿ ಭಾನುವಾರ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅಂದಾಜು 2 ಸಾವಿರ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ನಿತ್ಯ ಅಂದಾಜು 1300 ಮಾದರಿ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಬೆಳಗಾವಿ, ಹಾವೇರಿ, ಗದಗ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ದಾವಣಗೆರೆ ಸೇರಿ ಹಲವು ಜಿಲ್ಲೆಗಳ ಮಾದರಿಗಳು ಪರೀಕ್ಷೆಗಾಗಿ ನಮ್ಮ ಜಿಲ್ಲೆಗೆ ಬರುತ್ತಿವೆ. ಇದರಿಂದಾಗಿ ಪರೀಕ್ಷೆ ವರದಿ ನೀಡುವುದು ಸ್ವಲ್ಪ ತಡವಾಗುತ್ತದೆ. 1200 ಹಾಸಿಗೆಗಳ ಸಾಮರ್ಥ್ಯವುಳ್ಳ ಕಿಮ್ಸ್ನಲ್ಲಿ, 250 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಬದಲಾಯಿಸಲಾಗಿದೆ. ಇನ್ನೂ 350 ಹಾಸಿಗೆಗಳನ್ನು ಕೋವಿಡ್-19 ರೋಗಿಗಳಿಗಾಗಿ ಮಾರ್ಪಡಿಸಲಾಗುತ್ತದೆ. ಒಟ್ಟು 600 ಹಾಸಿಗೆಗಳನ್ನು ಕಿಮ್ಸ್ನಲ್ಲಿ ಕೋವಿಡ್ ರೋಗಿಗಳಿಗಾಗಿ ಮೀಸಲಿರಿಸಲಾಗುವುದು ಎಂದರು.
ಜಿಲ್ಲೆಯ ಹಲವು ಖಾಸಗಿ ಆಸ್ಪತ್ರೆಗಳು ಕೋವಿಡ್-19 ರೋಗಿಗಳಿಗೆ ಹಾಸಿಗೆಗಳನ್ನು ನೀಡಲು ಮುಂದೆ ಬಂದಿವೆ. ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಮುಂದೆ ಬರುವ ಖಾಸಗಿ ಆಸ್ಪತ್ರೆಗಳಿಗೆ, ಈಗಾಗಲೇ ಗುಣಮುಖರಾಗಿರುವ ಕೋವಿಡ್ ರೋಗಿಗಳ ಮಾಹಿತಿಯನ್ನು ನೀಡಲಾಗುವುದು. ಯಾವುದೇ ಖಾಸಗಿ ಆಸ್ಪತ್ರೆಗಳು ಗರ್ಭಿಣಿಯರ ಕೋವಿಡ್ ತಪಾಸಣೆ ನಡೆಸಲು ಹಣ ತೆಗೆದುಕೊಳ್ಳಬಾರದು. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಡಳಿತದಿಂದ ಊಟ ಸರಬರಾಜು ಮಾಡಲಾಗುವುದು. ಸ್ವಚ್ಛತಾ ಸಿಬ್ಬಂದಿ ಸೇರಿ ನಿರ್ವಹಣೆಗಾಗಿ ಇತರ ಅಗತ್ಯ ಸಿಬ್ಬಂದಿಯನ್ನು ಜಿಲ್ಲಾಡಳಿತದಿಂದ ನೇಮಿಸಲಾಗುವುದು ಎಂದರು.
ಖಾಸಗಿ ಕ್ಯಾನ್ಸರ್ ಹಾಗೂ ಹೆರಿಗೆ ಆಸ್ಪತ್ರೆಗಳಿಗೆ ಕೋವಿಡ್-19 ಚಿಕಿತ್ಸೆ ನೀಡುವುದರಿಂದ ವಿನಾಯಿತಿ ನೀಡಬೇಕು ಎಂದು ಖಾಸಗಿ ವೈದ್ಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಉಪ ವಿಭಾಗಾಧಿಕಾರಿ ಮಹಮದ್ ಜುಬೇರ, ಹುಬ್ಬಳ್ಳಿ ನಗರ ತಹಸೀಲ್ದಾರ್ ಶಶಿಧರ ಮಾಡ್ಯಾಳ, ಐಎಂಎ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಡಾ. ಕ್ರಾಂತಿ ಕಿರಣ, ಕಾರ್ಯದರ್ಶಿ ಡಾ. ಮಂಜುನಾಥ ನಾಯ್ಕರ, ಕೆಪಿಎಂಇಎ ಅಧ್ಯಕ್ಷ ಡಾ. ವಿಜಯ ಗಾಡಗಿ, ವೈದ್ಯರಾದ ಡಾ.ನಲತ್ವಾಡಮಠ, ಡಾ. ಬಿ.ಆರ್. ಪಾಟೀಲ ಸೇರಿ ವಿವಿಧ ಖಾಸಗಿ ಆಸ್ಪತ್ರೆ ವೈದ್ಯರು ಉಪಸ್ಥಿತರಿದ್ದರು.