ಕೋವಿಡ್ ಪಾಸಿಟಿವಿಟಿಯಲ್ಲಿಧಾರವಾಡ ಜಿಲ್ಲೆಗೆ 2ನೇ ಸ್ಥಾನ

carona logo
Published on

ಮರಿದೇವ ಹೂಗಾರ ಹುಬ್ಬಳ್ಳಿ
ಬೆಂಗಳೂರು ನಗರ ಬಿಟ್ಟರೆ ಅತಿ ಹೆಚ್ಚು ಕೋವಿಡ್ ಸೋಂಕಿತರ ಸಂಖ್ಯೆ ಧಾರವಾಡ ಜಿಲ್ಲೆಯಲ್ಲಿ ದಾಖಲಾಗಿದೆ. ಪಾಸಿಟಿವಿಟಿ ಪ್ರಮಾಣ ಶೇ. 11.2 ರಷ್ಟಿದ್ದು, ಜನರಿಗೆ ಕರೊನಾ ಸೋಂಕಿನ ಭೀತಿಯೇ ಇಲ್ಲವೆಂಬಂತೆ ಭಾಸವಾಗುತ್ತಿದೆ.
ಕಳೆದ ಜೂನ್​ನಲ್ಲಿ 70 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಜುಲೈನಲ್ಲಿ 661 ಜನರಿಗೆ ಸೋಂಕು ತಗುಲಿದ್ದು, ಮೂವರು ಮೃತಪಟ್ಟಿದ್ದರು. ಆಗಸ್ಟ್ 8ರವರೆಗೆ ಒಟ್ಟು 498 ಪ್ರಕರಣಗಳು ದಾಖಲಾಗಿದ್ದು, 10 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ-ಅಂಶಗಳು ಹೇಳುತ್ತಿವೆ.
ಧಾರವಾಡ ಜಿಲ್ಲೆಯಲ್ಲಿನ ಕೋವಿಡ್ ಸೋಂಕಿತರ ಸಂಖ್ಯೆ ಗಮನಿಸಿದರೆ, ಆಗಸ್ಟ್ 6 ಮತ್ತು 7ರಂದು ಕ್ರಮವಾಗಿ 98,113 ಇತ್ತು. ಬೆಂಗಳೂರು ನಗರದಲ್ಲಿ ನಿತ್ಯವೂ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಬೆಂಗಳೂರು ನಗರ ಬಿಟ್ಟರೆ ಎರಡನೇ ಸ್ಥಾನದಲ್ಲಿ ಧಾರವಾಡ ಜಿಲ್ಲೆ ಇತ್ತು. ಧಾರವಾಡ ಎರಡನೇ ಸ್ಥಾನ ಕ್ರಮಿಸುವುದಕ್ಕಿಂತ ಮುನ್ನ ಬೆಳಗಾವಿ ಮತ್ತು ಮೈಸೂರು ಜಿಲ್ಲೆಗಳು ಎರಡನೇ ಸ್ಥಾನದ ಸ್ಪರ್ಧಿಗಳಾಗಿದ್ದವು.
ಜುಲೈನಿಂದ ಕೋವಿಡ್ ಸೋಂಕಿತರ ಸಂಖ್ಯೆ ಏರುಮುಖವಾಗಿದೆ. ಜು. 26ರ ಹೊತ್ತಿಗೆ ಪಾಸಿಟಿವಿಟಿ ಪ್ರಮಾಣ ಶೇ. 6.9 ಇತ್ತು. ಆಗಸ್ಟ್ ಆರಂಭದಲ್ಲಿ ಇದು ಶೇ. 11.2ರಷ್ಟು ದಾಖಲಾಗಿದೆ. ಆದರೂ, ಸರ್ಕಾರದಿಂದ ಕೋವಿಡ್ ಮಾರ್ಗಸೂಚಿಗಳು ಪ್ರಕಟವಾಗಿಲ್ಲ. ಜನರೂ ಎಚ್ಚೆತ್ತುಕೊಳ್ಳುತ್ತಿಲ್ಲ. ‘ಕೋವಿಡ್ ಸೋಂಕು’ ನಮ್ಮ ಮಧ್ಯೆ ಇಲ್ಲವೆಂಬಂತೆ ಜನರು ಓಡಾಡುತ್ತಿದ್ದು, ಅಂಕಿ-ಅಂಶಗಳು ಮಾತ್ರ ಭಯ ಬೀಳಿಸುತ್ತಿವೆ.
ತೀವ್ರ ತರಹದ ರೋಗ ಲಕ್ಷಣಗಳಿಲ್ಲ: ಸತತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನೆಗಡಿ, ಕೆಮ್ಮು, ಜ್ವರ ಬಾಧೆ ಜನರಲ್ಲಿ ಕಂಡುಬರುತ್ತಿದೆ. ಗಂಟಲ ದ್ರವ ಮಾದರಿ ಪರೀಕ್ಷೆ ಮಾಡಿಸಿಕೊಳ್ಳಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಹಾಗಾಗಿ ಕೋವಿಡ್ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ತೀವ್ರ ತರಹದ ರೋಗ ಲಕ್ಷಣಗಳು ಕಂಡುಬಾರದೇ ಇರುವುದರಿಂದ ಮನೆಯಲ್ಲಿದ್ದು ಚಿಕಿತ್ಸೆ ಪಡೆಯಲು (ಹೋಂ ಐಸೋಲೇಷನ್) ವೈದ್ಯರು ಸಲಹೆ ನೀಡುತ್ತಿದ್ದಾರೆ. ಹಿರಿಯ ನಾಗರಿಕರು ಮತ್ತು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವವರು ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯಲು ಸೂಚಿಸುತ್ತಿದ್ದಾರೆ.

ಕೋವಿಡ್ ಸೋಂಕು ನಮ್ಮನ್ನು ಬಿಟ್ಟು ಹೋಗಿಲ್ಲ. ಅದರ ತೀವ್ರತೆ ಕಡಿಮೆ ಆಗಿರಬಹುದು. ಆದರೂ ಜನರು ಮೈ ಮರೆಯಬಾರದು. ಸ್ವಯಂ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು. ಕೋವಿಡ್ ಮುನ್ನೆಚ್ಚರಿಕಾ ಡೋಸ್ ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆ.-ಡಾ. ಈಶ್ವರ ಹಸಬಿ, ಕಿಮ್್ಸ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net