

ಅಂಕೋಲಾ: ತಾಲೂಕಿನಲ್ಲಿ ಕೋವಿಡ್-19 ಎರಡನೇ ಅಲೆ ತೀವ್ರ ಸ್ವರೂಪದಲ್ಲಿ ಹರಡುತ್ತಿದ್ದು, ಇದನ್ನು ನಿಯಂತ್ರಿಸಲು ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿ ಕಳೆದ ವರ್ಷ ಲಾಕ್ಡೌನ್ ವೇಳೆ ನಿರ್ವಹಿಸಿದ ಮಾದರಿಯಲ್ಲಿಯೇ ಈ ಬಾರಿಯೂ ಕೆಲಸ ಮಾಡಬೇಕು. ಇದಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಿ ಎಂದು ಶಾಸಕಿ ರೂಪಾಲಿ ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಸಭಾಭವನದಲ್ಲಿ ಶುಕ್ರವಾರ ನಡೆದ ಕೋವಿಡ್ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ
ನಾಡಿದ ರು. ತಾಲೂಕಿನಲ್ಲಿ ಆಮ್ಲಜನಕ, ಹಾಸಿಗೆ ಸೇರಿ ಯಾವುದೇ ಕೊರತೆಯಿಲ್ಲ. ಗ್ರಾಪಂ ಮಟ್ಟದಲ್ಲಿ ಕೋವಿಡ್ ನಿಯಂತ್ರಿಸಲು ಸ್ಥಳೀಯ ಜನಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು ಮುಂಜಾಗ್ರತೆ ವಹಿಸಿ ಕಾರ್ಯನಿರ್ವಹಿಸಬೇಕು ಎಂದರು.
ನನ್ನ ಅನುದಾನದಲ್ಲಿ ಕಾರವಾರ ಮತ್ತು ಅಂಕೋಲಾಕ್ಕೆ 4 ಆಂಬುಲೆನ್ಸ್ ಮುಂದಿನ 10 ದಿನದೊಳಗೆ ನೀಡುತ್ತಿದ್ದೇವೆ. 30 ಲಕ್ಷ ರೂಪಾಯಿಗಳ ಅನುದಾನದಲ್ಲಿ 2 ಆಂಬುಲೆನ್ಸ್ ಪಟ್ಟಣಕ್ಕೆ ಮತ್ತು 2 ಗ್ರಾಮೀಣ ಪ್ರದೇಶಕ್ಕೆ ನೀಡುತ್ತಿದ್ದೇನೆ ಎಂದರು.
ತಹಸೀಲ್ದಾರ್ ಉದಯ ಕುಂಬಾರ ಮಾತನಾಡಿ, ಹೋಂ ಕ್ವಾರಂಟೈನ್ ಇರುವುದರಿಂದ ಸೋಂಕಿತರು ಜಾಸ್ತಿ. ಮುನ್ನೆಚ್ಚರಿಕೆ ಕ್ರಮವಾಗಿ ಬಿಸಿಎಂ ವಸತಿ ನಿಲಯದಲ್ಲಿ 100 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ದಾಸ್ತಾನು ಇಡಲಾಗಿದೆ ಎಂದರು.
ಡಿವೈಎಸ್ಪಿ ಅರವಿಂದ ಕಲಗುಜ್ಜಿ ಮಾತನಾಡಿದರು. ತಾಪಂ ಇಒ ಪಿ.ವೈ. ಸಾವಂತ, ಟಿಎಚ್ಒ ನಿತಿನ್ ಹೊಸ್ಮೆಲ್ಕರ, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಮಹೇಂದ್ರ ನಾಯಕ, ಸಿಪಿಐ ಕೃಷ್ಣಾನಂದ ನಾಯಕ, ಪುರಸಭೆ ಮುಖ್ಯಾಧಿಕಾರಿ ಬಿ. ಪ್ರಹ್ಲಾದ, ಗ್ರಾಮೀಣ ಕುಡಿಯುವ ನೀರಿನ ವಿಭಾಗದ ಇಂಜಿನಿಯರ್ ಗುರುದತ್ತ ಶೇಟ್, ಪ್ರಮುಖರಾದ ರಾಜೇಂದ್ರ ನಾಯ್ಕ, ಸಂಜಯ ನಾಯ್ಕ, ಕವನ ಕುಮಾರ ಉಪಸ್ಥಿತರಿದ್ದರು.