ಕೋವಿಡ್ ಟೆಸ್ಟ್​ಗೆ ನಿಯಂತ್ರಣ

covid-19
Published on

ವಿಜಯವಾಣಿ ವಿಶೇಷ ಹುಬ್ಬಳ್ಳಿ

ಧಾರವಾಡ ಜಿಲ್ಲೆಯಲ್ಲಿ ಕರೊನಾ ಪರೀಕ್ಷೆ ಪ್ರಮಾಣವನ್ನು ನಿಯಂತ್ರಿಸಲಾಗಿದೆಯೆ?

ಕಳೆದೆರಡು ದಿನಗಳಿಂದ ಗಂಟಲ ದ್ರವ ಸಂಗ್ರಹ ಕೇಂದ್ರಗಳಲ್ಲಿಯ ಚಟುವಟಿಕೆ ನೋಡಿದಾಗ ಹೀಗೆ ಸಂಶಯ ಬರತೊಡಗಿದೆ.

ಕರೊನಾ ಸೋಂಕಿತರ ಪ್ರಮಾಣ ದಿನೇ ದಿನೆ ಹೆಚ್ಚಳವಾಗುತ್ತಿರುವುದರ ಮಧ್ಯೆಯೇ, ಗಂಟಲ ದ್ರವ ಪರೀಕ್ಷೆ ಮಾಡಿಸಿಕೊಳ್ಳಲು ಹೋದ ಹಲವರನ್ನು ಥರ್ಮಲ್ ಸ್ಕ್ರೀನಿಂಗ್ ಹಂತದಲ್ಲೇ ‘ನಿಮಗೇನೂ ಆಗಿಲ್ರೀ…’ ಎಂದು ಹೇಳಿ ವಾಪಸ್ ಕಳುಹಿಸುತ್ತಿರುವುದು ಕಂಡುಬಂದಿದೆ.

ಈ ಮೊದಲು ಅನುಮಾನ ಇದ್ದರೂ ಕಫ ಪರೀಕ್ಷೆ ಮೂಲಕ ಪರಿಹರಿಸಿಕೊಳ್ಳಬಹುದಾಗಿತ್ತು. ಈಗ ದಿಢೀರ್ ಪರಿಸ್ಥಿತಿ ಬದಲಾಗಿರುವುದು ಕಳವಳಕ್ಕೆ ಕಾರಣವಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಆರಂಭದಿಂದಲೂ ಕರೊನಾ ನಿಯಂತ್ರಣದಲ್ಲಿತ್ತು. ಕಳೆದ 5 ದಿನದಿಂದ ಹೆಚ್ಚು ಪ್ರಕರಣಗಳು ಕಂಡುಬರುತ್ತಿದ್ದು, ಆತಂಕ ಜಾಸ್ತಿಯಾಗತೊಡಗಿದೆ. ಈ ಸಂದರ್ಭದಲ್ಲೇ ಸರ್ಕಾರದ ಮಾರ್ಪಡಿತ ನಿರ್ದೇಶನದಂತೆ ಸೀಮಿತ ಜನರ ಗಂಟಲ ದ್ರವ ಮಾತ್ರ ಸಂಗ್ರಹಿಸಲಾಗುತ್ತಿದೆ. ಇದು ಹಲವರಲ್ಲಿ ಗಾಬರಿ ಹುಟ್ಟಿಸಿದೆ.

ಉಸಿರಾಟದ ಸಮಸ್ಯೆ, ಸಣ್ಣದಾಗಿ ಜ್ವರ-ಕೆಮ್ಮು ಇದ್ದವರು ಆಸ್ಪತ್ರೆಗೆ ಬಂದರೂ ಪರೀಕ್ಷೆ ಮಾಡದೇ ಇದ್ದರೆ ಮತ್ತಷ್ಟು ಜನರಿಗೆ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿದೆ. ಕಿಮ್ಸ್​ಗೆ ಜ್ವರವೆಂದು ಬಂದಿದ್ದ ಗರ್ಭಿಣಿಗೆ ಹಾಗೂ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿಗೂ ಸೋಂಕು ತಗುಲಿದ ಉದಾಹರಣೆಗಳಿವೆ. ಆದ್ದರಿಂದ ಸೀಲ್​ಡೌನ್ ಪ್ರದೇಶದ ಜನ ಮತ್ತು ಶಂಕಿತ ವ್ಯಕ್ತಿಗಳ ಗಂಟಲ ದ್ರವ ಪಡೆಯುವುದು ಅಗತ್ಯವಿದೆ. ಇಲ್ಲವಾದರೆ ಇವರಿಂದಲೇ ಮತ್ತಷ್ಟು ಜನರಿಗೆ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಆದಾಗ್ಯೂ, 2 ದಿನದಿಂದ ಸೀಲ್​ಡೌನ್ ಪ್ರದೇಶದ ಜನರ ಗಂಟಲ ದ್ರವ ಪರೀಕ್ಷೆ ಮಾಡಲಾಗುತ್ತಿಲ್ಲ. ಥರ್ಮಲ್ ಸ್ಕ್ರೀನಿಂಗ್ ಮಾತ್ರ ಮಾಡಲಾಗುತ್ತಿದೆ. ಕೆಲವರು ತಮಗೆ ಕರೊನಾ ಇದೆಯಾ ಎಂದು ಪರೀಕ್ಷಿಸುವಂತೆ ವಿನಂತಿಸಿಕೊಂಡರೂ ನಿರಾಕರಿಸಲಾಗಿದೆ.

ಗಂಟಲ ದ್ರವ ಸಂಗ್ರಹ ಕುಸಿತ ಕರೊನಾ ಸೋಂಕು ಆಗಷ್ಟೇ ಜಿಲ್ಲೆಗೆ ಕಾಲಿಟ್ಟಾಗ ಹುಬ್ಬಳ್ಳಿ ಕಿಮ್್ಸ ಒಂದರಲ್ಲೇ ನಿತ್ಯ 300 ಜನರ ಗಂಟಲ ದ್ರವ ಸಂಗ್ರಹ ಮಾಡಲಾಗುತ್ತಿತ್ತು. ಈಗ ಅದರ ಪ್ರಮಾಣ 30-40ಕ್ಕೆ ಇಳಿದಿದೆ. ಹುಬ್ಬಳ್ಳಿ ಚಿಟಗುಪ್ಪಿ, ಧಾರವಾಡದ ಎಸ್​ಡಿಎಂ ಸೇರಿ ಅನೇಕ ಆಸ್ಪತ್ರೆಗಳಲ್ಲಿ ಗಂಟಲ ದ್ರವ ಸಂಗ್ರಹ ಸ್ಥಗಿತಗೊಂಡಿದೆ. ಪರೀಕ್ಷೆಗಳೇ ಇಲ್ಲವಾದರೆ ಸೋಂಕು ಪತ್ತೆ ಹಚ್ಚುವುದು ಯಾವಾಗ? ಕರೊನಾ ಹರಡಿರುವ, ಹರಡಬಹುದಾದ ಪ್ರದೇಶಗಳನ್ನು ಆಧರಿಸಿ ಸರ್ಕಾರ ಗಟ್ಟಿ ತೀರ್ಮಾನ ಕೈಗೊಳ್ಳಬೇಕಾದ ತುರ್ತು ಅಗತ್ಯವಿದೆ. ಇಲ್ಲವಾದರೆ ಸೋಂಕಿತ ಒಬ್ಬ ವ್ಯಕ್ತಿ ಸಕಾಲದಲ್ಲಿ ಪತ್ತೆಯಾಗದಿದ್ದರೂ ಧಾರವಾಡ ಜಿಲ್ಲೆಯಲ್ಲಿ ಮುಂಬೈ, ದೆಹಲಿಯಂಥ ಸಂಕಟಮಯ ಪರಿಸ್ಥಿತಿ ಎದುರಾಗುವ ಅಪಾಯವಿದೆ.

ಸರ್ಕಾರಿ ಆದೇಶ? 10 ದಿನದಿಂದ ತೀವ್ರ ಜ್ವರ(38.6), ಕೆಮ್ಮು ಇಲ್ಲವೆ ಉಸಿರಾಟದ ಸಮಸ್ಯೆ ಇದ್ದರೆ; ಸೋಂಕಿತ ವ್ಯಕ್ತಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕವಿದೆ ಎಂದು ಆರೋಗ್ಯ ಇಲಾಖೆ ವರದಿ ನೀಡಿದ್ದರೆ ಮಾತ್ರ ಗಂಟಲ ದ್ರವ ಸಂಗ್ರಹಿಸಬೇಕು ಎಂದು ಆರೋಗ್ಯ ಇಲಾಖೆ 3 ದಿನದ ಹಿಂದೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ. ಇದನ್ನು ಯಥಾವತ್ ಪಾಲನೆ ಮಾಡಲು ಮುಂದಾಗಿ, ಜಿಲ್ಲೆಯಲ್ಲಿ ಕರೊನಾ ನಿರ್ಲಕ್ಷಿಸಲಾಗುತ್ತಿದೆಯೆ ಎಂಬ ಅನುಮಾನ ಮೂಡತೊಡಗಿದೆ.

ಕೋವಿಡ್ ಪರೀಕ್ಷೆ ಮಾಡದಿರಿ, ಕಡಿಮೆ ಮಾಡಿ ಎಂದು ಸೂಚಿಸಲಾಗಿಲ್ಲ. ಉಸಿರಾಟದ ಸಮಸ್ಯೆ, ಜ್ವರ-ಕೆಮ್ಮು ಇದ್ದವರು ಬಂದರೆ ಕಡ್ಡಾಯವಾಗಿ ಪರೀಕ್ಷೆ ಮಾಡಿ. ಸರ್ಕಾರದ ಮಾರ್ಗಸೂಚಿಗಳ ಪಾಲನೆ ಮಾಡಿ ಎಂದು ಸೂಚಿಸಲಾಗಿದೆ. ಜನರು ಕಳವಳಗೊಳ್ಳಬೇಕಿಲ್ಲ. - ದೀಪಾ ಚೋಳನ್, ಧಾರವಾಡ ಜಿಲ್ಲಾಧಿಕಾರಿ

ಕರೊನಾ ಪರೀಕ್ಷೆ ಕಡಿಮೆ ಮಾಡಲಾಗಿದೆಯೆ ಎನ್ನುವುದು ನನ್ನ ಗಮನಕ್ಕೆ ಬಂದಿಲ್ಲ. ಬುಧವಾರ ಮಧ್ಯಾಹ್ನ ಅಧಿಕಾರಿಗಳ ಸಭೆ ಕರೆದಿದ್ದೇನೆ. ಪರೀಕ್ಷೆ ಪ್ರಮಾಣ ನಿಯಂತ್ರಿಸಲಾಗಿದೆಯೆ? ಎಂದು ವಿಚಾರಿಸಿ, ಸೂಕ್ತ ಸೂಚನೆ ನೀಡಲಾಗುವುದು - ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net