

ಹುಬ್ಬಳ್ಳಿ: ಕರೊನಾ ಹಾವಳಿಯಿಂದ ಆಮೆಗತಿಯಲ್ಲಿ ಸಾಗಿದ್ದ ಪ್ರಕರಣಗಳ ವಿಚಾರಣೆಗೆ ವೇಗ ನೀಡುವ ನಿಟ್ಟಿನಲ್ಲಿ ಇಲ್ಲಿನ ಹಳೇ ನ್ಯಾಯಾಲಯದ ಆವರಣದಲ್ಲಿ ರಿಮಾಂಡ್ ಮತ್ತು ವರ್ಚುವಲ್ ಕೋವಿಡ್- 19 ವಿಶೇಷ ಕೋರ್ಟ್ ಶೀಘ್ರ ಆರಂಭವಾಗಲಿದೆ.
ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಮಾತ್ರ ನಡೆಯುತ್ತಿದ್ದು, ಆರೋಪಿಗಳು, ಸಾಕ್ಷಿದಾರರ ದೈಹಿಕ ಹಾಜರಿ ಇರಲಿಲ್ಲ. ಬದಲಾಗಿ ವಿಡಿಯೋ ಕಾನ್ಪರೆನ್ಸ್ ಮೂಲಕ ಆಯ್ದ ಕೆಲವೇ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ನ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಸರ್ (ಎಸ್ಒಪಿ) ನಿಯಮ ಅನುಸಾರ ಪ್ರಕರಣ ನಡೆಸುತ್ತಿದ್ದ ವಕೀಲರು ಮಾತ್ರ ಕೋರ್ಟ್ಗೆ ಹಾಜರಾಗಲು ಅವಕಾಶವಿತ್ತು. ವಿಚಾರಣಾಧೀನ ಖೈದಿಗಳು, ಸಾಕ್ಷಿದಾರರು ಕಲಾಪಗಳಿಂದ ದೂರ ಇದ್ದರು. ಹಾಗಾಗಿ, ಹಲವು ಪ್ರಕರಣಗಳು ಬಾಕಿ ಉಳಿದಿವೆ.
ಈ ಹಿನ್ನೆಲೆಯಲ್ಲಿ ಎಸ್ಒಪಿ ಮಾರ್ಗಸೂಚಿ ಅನ್ವಯ ಅಗತ್ಯ ಸುರಕ್ಷಾ ಕ್ರಮಗಳೊಂದಿಗೆ ರಿಮಾಂಡ್ ಮತ್ತು ವರ್ಚುವಲ್ ಕೋವಿಡ್- 19 ಕೋರ್ಟ್ ಸ್ಥಾಪಿಸಲು ಹೈಕೋರ್ಟ್ ಮುಂದಾಗಿದೆ. ಅದಕ್ಕಾಗಿ ಇಲ್ಲಿನ ಹಳೇ ಕೋರ್ಟ್ನಲ್ಲಿ ಸಿದ್ಧತೆಗಳು ನಡೆದಿವೆ. ಈ ಕೋರ್ಟ್ ಗಳಲ್ಲಿ ವಿಚಾರಣಾಧೀನ ಖೈದಿಗಳು, ಸಾಕ್ಷಿ, ವಕೀಲರು ಸೇರಿ ಎಲ್ಲರ ವಿಚಾರಣೆ ನಡೆಸಿ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಬಹುದಾಗಿದೆ.
ಕೋರ್ಟ್ ವಿಶೇಷತೆ ಏನು?: ರಿಮಾಂಡ್ ಕೋರ್ಟ್ನಲ್ಲಿ ಪ್ರಕರಣಗಳ ಆಯ್ಕೆಗಾಗಿ ಇಬ್ಬರು ಹಿರಿಯ ವಕೀಲರನ್ನು ನೇಮಿಸಲಾಗುತ್ತದೆ. ತುರ್ತು ಅಗತ್ಯವಿದ್ದ ಮತ್ತು ಪ್ರಮುಖ ಪ್ರಕರಣಗಳನ್ನು ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.
ನ್ಯಾಯಾಧೀಶರು, ವಕೀಲರು ಹಾಗೂ ವಿಚಾರಣಾಧೀನ ಖೈದಿಗಳನ್ನು ಪ್ರತ್ಯೇಕಿಸಲು ಫೈಬರ್ ಗ್ಲಾಸ್ ಅಳವಡಿಸಲಾಗುವುದು. ಪ್ರತಿಯೊಬ್ಬರ ಥರ್ಮಲ್ ತಪಾಸಣೆ ನಡೆಸಲಾಗುವುದು. ನ್ಯಾಯಾಲಯ ಆವರಣವನ್ನು ಆಗಾಗ ಸ್ಯಾನಿಟೈಸೇಶನ್ ಮಾಡಲಾಗುವುದು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗುತ್ತದೆ.
ಹಳೇ ನ್ಯಾಯಾಲಯ ಸಂಕೀರ್ಣದಲ್ಲಿ ಹೈಕೋರ್ಟ್ ಎಸ್ಒಪಿ ಮಾರ್ಗಸೂಚಿಯಂತೆ ರಿಮಾಂಡ್ ಮತ್ತು ವರ್ಚುವಲ್ ಕೋವಿಡ್- 19 ಕೋರ್ಟ್ 1 ವಾರದಲ್ಲಿ ಸಿದ್ಧವಾಗಲಿದೆ. ವಿಚಾರಣಾಧೀನ ಖೈದಿಗಳು, ಸಾಕ್ಷಿದಾರರ ವಿಚಾರಣೆ ಸೇರಿ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯೂ ನಡೆಯಲಿದೆ. ಗುರು ಹಿರೇಮಠ ಪ್ರಧಾನ ಕಾರ್ಯದರ್ಶಿ, ಹುಬ್ಬಳ್ಳಿ ವಕೀಲರ ಸಂಘ