

ಹುಬ್ಬಳ್ಳಿ: ತಾಲೂಕಿನ ಕೋಳಿವಾಡ ಗ್ರಾಮದ ಬಸ್ ನಿಲ್ದಾಣ ಬಳಿಯ ದಿನಸಿ ಹಾಗೂ ಗೊಬ್ಬರ ಮಳಿಗೆಯಲ್ಲಿ ಮಂಗಳವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ. ಮೌಲ್ಯದ ಹಾನಿಯಾದ ಘಟನೆ ನಡೆದಿದೆ.
ಕೋಳಿವಾಡದ ಶಂಭುಲಿಂಗಪ್ಪ ಜಂತ್ಲಿ ಅವರಿಗೆ ಸೇರಿದ ದಿನಸಿ ಹಾಗೂ ಅಗ್ರೋ ಕೇಂದ್ರ ಇದಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಕಿರಾಣಿ ಸಾಮಗ್ರಿ, ರಸಗೊಬ್ಬರ, ಕ್ರಿಮಿನಾಶಕ ಹಾಗೂ ಇತರೆ ವಸ್ತುಗಳು ಅಂಗಡಿಯಲ್ಲಿದ್ದವು ಎಂದು ಹೇಳಲಾಗಿದೆ.
ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಗ್ರಾಮಸ್ಥರು ಸೇರಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಸ್ಥಳೀಯರು 10ಕ್ಕೂ ಹೆಚ್ಚು ಟ್ಯಾಂಕರ್ ನೀರು ತರಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆದರೂ ಬೆಂಕಿಯಲ್ಲಿ ವಸ್ತುಗಳು ಸುಟ್ಟು ಕರಕಲಾಗಿವೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಗ್ರಾಮಸ್ಥರ ನೆರವಿನೊಂದಿಗೆ ಪೂರ್ತಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಕೆನ್ನಾಲಿಗೆಗೆ ಸಿಕ್ಕ ಕಟ್ಟಿಗೆ ಮಡಿಗೆಯ ಕಟ್ಟಡವೂ ಪೂರ್ತಿ ಹಾನಿಯಾಗಿದೆ. ಈಗಾಗಲೇ ಬೆಳೆಸಾಲ, ಗೊಬ್ಬರ, ಕ್ರಿಮಿನಾಶಕ ಇತ್ಯಾದಿಗಾಗಿ ಲಕ್ಷಾಂತರ ರೂ. ಸಾಲ ಮಾಡಿ ರೈತರ ಅನುಕೂಲಕ್ಕಾಗಿ ಗ್ರಾಮದಲ್ಲಿ ವ್ಯಾಪಾರ ಮಾಡುತ್ತಿದ್ದೆ. ಬೆಂಕಿಯಿಂದ ಎಲ್ಲ ಸುಟ್ಟು ಹೋಗಿದೆ ಎಂದು ಮಳಿಗೆ ಮಾಲೀಕರು ಕಣ್ಣೀರು ಹಾಕಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಪೊಲೀಸರು, ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.