ಕೋರ್ಟ್ ಕಲಾಪ ಪುನರಾರಂಭ

h13-Court
Published on

ಹುಬ್ಬಳ್ಳಿ: ಕರೊನಾ ಲಾಕ್​ಡೌನ್ ಬಳಿಕ ಕಕ್ಷಿದಾರರು, ಸಾಕ್ಷಿದಾರರಿಲ್ಲದೇ ನಡೆಯುತ್ತಿದ್ದ ಕೋರ್ಟ್ ಕಲಾಪಗಳು ಹೈಕೋರ್ಟ್ ಎಸ್​ಒಪಿ (ಸ್ಟ್ಯಾಂಡರ್ಡ್ ಆಪರೇಷನ್ ಪ್ರೊಸೀಡಿಂಗ್) ಆದೇಶದನ್ವಯ ಅ. 12ರಿಂದ ಸೀಮಿತ ಪ್ರಕರಣಗಳ ಸಾಕ್ಷಿಗಳ ವಿಚಾರಣೆಯೊಂದಿಗೆ ಪುನರಾರಂಭಗೊಂಡಿವೆ.

ಇಲ್ಲಿನ ತಿಮ್ಮಸಾಗರದ ಹುಬ್ಬಳ್ಳಿ ನ್ಯಾಯಾಲಯ ಸಂಕೀರ್ಣದಲ್ಲಿ ಒಟ್ಟು 18 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಕೋರ್ಟ್​ನಲ್ಲಿ ದಿನಕ್ಕೆ 5 ಕೇಸ್​ನಂತೆ 18 ಕೋರ್ಟ್​ಗಳಲ್ಲಿ ಒಟ್ಟು 90 ಪ್ರಕರಣಗಳ ವಿಚಾರಣೆ ನಡೆಸಲಾಗುತ್ತದೆ. ನಾಳೆ ನಡೆಯುವ ಐದು ಪ್ರಕರಣಗಳಿಗೆ ಸಂಬಂಧಪಟ್ಟ ವಕೀಲರು, ಸಾಕ್ಷಿದಾರರಿಗೆ ಮೊದಲೇ ಸಮನ್ಸ್ ನೀಡಲಾಗುತ್ತದೆ.

ವಿಚಾರಣೆಗೆ ಹಾಜರಾಗುವ ಸಾಕ್ಷಿದಾರರರು, ಆರೋಪಿಗಳು ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಗಾಗಬೇಕಿದೆ. ಅದಕ್ಕಾಗಿ ಕೋರ್ಟ್ ಆವರಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ‘ಆಂಟಿಜನ್ ರ್ಯಾಪಿಡ್ ಟೆಸ್ಟ್’ ಕೇಂದ್ರ ಸ್ಥಾಪಿಸಲಾಗಿದೆ. ಕರೊನಾ ವರದಿ ನೆಗೆಟಿವ್ ಬಂದರೆ ಮಾತ್ರ ವಿಚಾರಣೆಗೆ ಅವಕಾಶ ನೀಡಲಾಗುತ್ತದೆ. ಪಾಸಿಟಿವ್ ಬಂದರೆ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದು ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ ತಿಳಿಸಿದ್ದಾರೆ. ಲಾಕ್​ಡೌನ್ ನಂತರ ಕೇಸ್​ಗೆ ಸಂಬಂಧಪಟ್ಟ ವಕೀಲರು ಮಾತ್ರ ಹಾಜರಾಗಿ ಸಾಕ್ಷಿಗಳನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ಹಾಜರುಪಡಿಸುತ್ತಿದ್ದರು. ಇದರಿಂದ ಕೆಲ ವಕೀಲರು ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಕಲಾಪಗಳು ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಸ್ವಲ್ಪ ನಿರಾಳವಾಗಿದ್ದಾರೆ.

ಕಾಂಪೌಂಡ್ ಹೊರಗೆ ನೋಟರಿ: ಕೋರ್ಟ್ ಆವರಣದಲ್ಲಿ ನ್ಯಾಯಾಧೀಶರು, ವಕೀಲರು ಮತ್ತು ಸಿಬ್ಬಂದಿಗೆ ಮಾತ್ರ ರ್ಪಾಂಗ್​ಗೆ ಅನುಮತಿ ನೀಡಲಾಗಿದೆ. ವಕೀಲರಿಗೆ ಕರೊನಾ ತಪಾಸಣೆ ಕಡ್ಡಾಯವಿಲ್ಲ. ನೋಟರಿಗಳಿಗೆ ಕೋರ್ಟ್ ಆವರಣದೊಳಗೆ ಇನ್ನೂ ಅವಕಾಶ ನೀಡಲಾಗಿಲ್ಲ. ಹಾಗಾಗಿ, ಅವರು ಕೋರ್ಟ್ ಕಾಂಪೌಂಡ್ ಹೊರಗೆ ರಸ್ತೆಬದಿ ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಕರೊನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲ ನ್ಯಾಯಾಲಯಗಳ ಸಭಾಂಗಣದಲ್ಲಿ ನ್ಯಾಯಾಧೀಶರು, ಸಾಕ್ಷಿದಾರರು ಹಾಗೂ ವಕೀಲರಿಗೆ ಪ್ರತ್ಯೇಕ ಫೈಬರ್ ರಕ್ಷಾಕವಚ ಅಳವಡಿಸ ಲಾಗಿದೆ. ಕೋರ್ಟ್​ಯೂಳಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. | ಅಶೋಕ ಬಳಿಗಾರ ಅಧ್ಯಕ್ಷ, ಹುಬ್ಬಳ್ಳಿ ವಕೀಲರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net