ಕೋತಂಬರಿಗೆ ದಾಖಲೆ ದರ

h23-Market 2
Published on

ಹುಬ್ಬಳ್ಳಿ: ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ ಕೋತಂಬರಿ ಕಟ್ಟು ಶನಿವಾರದಂದು ದಾಖಲೆಯ ದರಕ್ಕೆ ಮಾರಾಟವಾಗಿದೆ !

ಇದೇ ಮೊದಲ ಬಾರಿಗೆ ಒಂದು ಕೋತಂಬರಿ ಕಟ್ಟಿಗೆ 80-90 ರೂ.ವರೆಗೂ ಏರಿಕೆಯಾಗಿದೆ. ಕೆಲ ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಕೋತಂಬರಿ ಸೇರಿ ಇತರ ಸೊಪು್ಪ ಹಾಗೂ ತರಕಾರಿ ಬೆಳೆ ಹಾನಿಗೀಡಾಗಿದೆ. ಹೀಗಾಗಿ ಮಾರುಕಟ್ಟೆಗೆ ಅತಿ ಕಡಿಮೆ ಪ್ರಮಾಣದಲ್ಲಿ ಸೊಪ್ಪು ಬರುತ್ತಿದೆ. ಈ ಮಧ್ಯೆ ಸೋಂಕಿನ ಭೀತಿಯಿಂದಾಗಿ ಭಾನುವಾರ ಕರ್ಫ್ಯೂಗೆ ಕರೆ ನೀಡಲಾಗಿದೆ.

ಸೋಮವಾರದ ರಂಜಾನ್ ಆಚರಣೆಗೆ ಕೋತಂಬರಿ ಹಾಗೂ ಇತರ ತರಕಾರಿ, ಡ್ರೖೆ ಫ್ರುಟ್ಸ್ ಸಿಗುವುದೋ ಇಲ್ಲವೋ ಎಂಬ ಕಾರಣಕ್ಕೆ ಜನರು ಶನಿವಾರವೇ ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ.

ರಂಜಾನ್ ಹಬ್ಬದ ಅಡುಗೆ ತಯಾರಿಯಲ್ಲಿ ಕೋತಂಬರಿಗೆ ಪ್ರಮುಖ ಪಾತ್ರ. ಶನಿವಾರ ಬೆಳಗ್ಗೆ ಪ್ರತಿ ಕಟ್ಟಿಗೆ 90 ರೂ.ಗಳವರೆಗೆ ಮಾರಾಟಗೊಂಡಿತ್ತು. ಮಧ್ಯಾಹ್ನದ ನಂತರ ಜನತಾ ಬಜಾರ, ಎಂ.ಜಿ. ಮಾರುಕಟ್ಟೆ ಹಾಗೂ ಬಡಾವಣೆಗಳಲ್ಲಿ ತರಕಾರಿ ಮಾರುತ್ತಿದ್ದವರ ಬಳಿ ಕೋತಂಬರಿ ಖಾಲಿಯಾಗಿತ್ತು.

ಎಪಿಎಂಸಿಯಲ್ಲಿ ಶನಿವಾರ ಬೆಳಗ್ಗೆ 20-30 ರೂ.ಗಳಿಗೆ ಒಂದು ಕಟ್ಟಿನಂತೆ ಮಾರಾಟವಾಗಿದ್ದ ಕೋತಂಬರಿ, ಮಾರುಕಟ್ಟೆಗೆ ಬರುತ್ತಿದ್ದಂತೆಯೇ ದಾಖಲೆಯ ಮಟ್ಟಕ್ಕೆ ಏರಿಕೆಯಾಯಿತು.

ಸುರಕುಂಬ ತಯಾರಿಕೆಗೆ ಬೇಕಾದ ಶಾವಿಗೆ, ಏಲಕ್ಕಿ, ಲವಂಗ, ಗೋಡಂಬಿ, ಒಣ ದ್ರಾಕ್ಷಿಯ ಬೆಲೆಗಳೂ ಹೆಚ್ಚಿದ್ದವು. ಸೋಮವಾರ ಬೆಳಗ್ಗೆ ಹಾಲು ಸಿಗುವುದೋ ಅಥವಾ ಇಲ್ಲವೋ ಎಂಬ ಆತಂಕದಿಂದ ಅನೇಕರು ಶನಿವಾರವೇ ಸಾಕಷ್ಟು ಹಾಲು ಖರೀದಿಸಿದ್ದಾರೆ.

ಪುದಿನಾ ಸೊಪು್ಪ ಸಹ ಪ್ರತಿ ಕಟ್ಟಿಗೆ 60-70 ರೂ.ಗಳಂತೆ ಮಾರಾಟವಾಗಿದೆ. ಬೀನ್ಸ್ ಪ್ರತಿ ಕೆಜಿಗೆ 120 ರೂ.ಗಳಂತೆ, ಕ್ಯಾಬೇಜ್ 40-50 ರೂ.ಗೆ ಒಂದರಂತೆ, ಹೀರೆಕಾಯಿ 60 ರೂ.ಗೆ ಪ್ರತಿ ಕೆಜಿಯಂತೆ ಮಾರಾಟವಾಗಿವೆ.

ರಂಜಾನ್ ಹಬ್ಬ ಸೋಮವಾರ ಆಚರಣೆ

ಹುಬ್ಬಳ್ಳಿ: ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಮುಸ್ಲಿಂರು ಮೇ 25ರಂದು ರಂಜಾನ್ ಹಬ್ಬ ಆಚರಿಸಲಿದ್ದಾರೆ.

ಹುಬ್ಬಳ್ಳಿ ಕೇಂದ್ರವಾಗಿಟ್ಟುಕೊಂಡು 100 ಕಿ.ಮೀ. ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 8 ಗಂಟೆಯವರೆಗೆ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ಮುಸ್ಲಿಂ ಸಮಾಜದವರು ಭಾನುವಾರ ಕೊನೆಯ ಉಪವಾಸ ಹಾಗೂ ಸೋಮವಾರ ಹಬ್ಬ ಆಚರಣೆ ಮಾಡಬೇಕೆಂದು ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಸೂಚಿಸಿದೆ. ಸಂಸ್ಥೆಯ ಚಾಂದ್ ಸಮಿತಿ ಸದಸ್ಯರು ಶನಿವಾರ ಸಂಜೆ ಸಭೆ ಸೇರಿ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಬಾರಿ ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಇರುವುದಿಲ್ಲ. ಸೋಮವಾರ ಬೆಳಗ್ಗೆ 9.30ಕ್ಕೆ ಮಸೀದಿಗಳಲ್ಲಿ ಐದು ಜನರು ಮಾತ್ರ ನಮಾಜ್ ಮಾಡುವರು. ಉಳಿದವರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು ಹಾಗೂ ಹಬ್ಬ ಆಚರಣೆ ಮಾಡಬೇಕೆಂದು ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷ ಎಂ.ಸಿ. ಸವಣೂರ ತಿಳಿಸಿದ್ದಾರೆ.

ಹಬ್ಬದ ದಿನದಂದು ನಗರದ 6 ಈದ್ಗಾ ಮೈದಾನಗಳಲ್ಲಿ ತಲಾ ಐವರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕೆಂದು ಸಂಸ್ಥೆ ಜಿಲ್ಲಾಡಳಿತವನ್ನು ಕೋರಿತ್ತು. ಆದರೆ, ಜಿಲ್ಲಾಡಳಿತ ಅವಕಾಶ ನೀಡಿಲ್ಲ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net