ಕೋಡಿಬಾಗದಲ್ಲಿ ಮೈದಾನ ಸೃಷ್ಟಿ

23KWR2
Published on

ಕಾರವಾರ: ಕಾಳಿ ನದಿ ಅರಬ್ಬಿ ಸಮುದ್ರ ಸೇರುವ ಜಾಗದಲ್ಲಿ ದೊಡ್ಡ ಮೈದಾನ ಸೃಷ್ಟಿಯಾಗಿದ್ದು, ನದಿಯ ನೀರಿನ ಸುಗಮ ಹರಿವಿಗೆ ಅಡ್ಡಿಯಾಗುವ ಆತಂಕವಿದೆ.

ಕಾಳಿ ನದಿಯ ಎಡಭಾಗ ಹಾಗೂ ಟ್ಯಾಗೋರ್ ಕಡಲ ತೀರದ ಉತ್ತರ ತುದಿ ಸೇರುವಲ್ಲಿ ಸುಮಾರು 20 ಎಕರೆಗೂ ದೊಡ್ಡ ಮೈದಾನ ಸೃಷ್ಟಿಯಾಗಿದೆ. ಮಳೆಗಾಲ ಮುಗಿದ ನಂತರ ಸಮುದ್ರ ದಡದಲ್ಲಿ ಮರಳಿನ ದಿಬ್ಬ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಇತ್ತೀಚಿನ ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಜಾಗ ಸೃಷ್ಟಿಯಾಗಿದೆ ಎಂಬುದು ಸ್ಥಳೀಯ ಮೀನುಗಾರರ ಅಭಿಪ್ರಾಯ. ಮರಳಿನ ದಿಣ್ಣೆ ಕಾಳಿ ನದಿ ನೀರು ಸಮುದ್ರ ಸೇರುವ ಜಾಗವನ್ನೂ ಆಕ್ರಮಿಸಿ ದೇವಬಾಗವರೆಗೂ ವಿಸ್ತರಣೆಯಾಗಿದೆ. ಇದರಿಂದ ಕಾಳಿ ನದಿ ಹಾಗೂ ಅರಬ್ಬಿ ಸಮುದ್ರದ ನಡುವ ದೋಣಿ ಸಂಚಾರಕ್ಕೂ ಮುಂದೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಉಸುಕಿನ ದಿಬ್ಬ ದೊಡ್ಡದಾದರೆ, ಮುಂದೆ ಸಣ್ಣ ಸಣ್ಣ ಮಳೆಗೂ ಪ್ರವಾಹ ಬರಬಹುದು, ಅಥವಾ ಕಾಳಿ ಅಳಿವೆಯ ಬಲಬದಿಗೆ ಖಾಸಗಿ ಭೂಮಿ ಹಾಗೂ ದೇವಬಾಗ ಜಂಗಲ್ ರೆಸಾರ್ಟ್ ಪ್ರದೇಶದಲ್ಲಿ ಸಮುದ್ರ ಕೊರೆತ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಕಾರಣವೇನು?: ಇದು ಈ ಒಂದು ವರ್ಷದ ಬೆಳವಣಿಗೆಯಲ್ಲ. ಕದ್ರಾ ಅಣೆಕಟ್ಟೆ ನಿರ್ವಣವಾದಾಗಿನಿಂದಲೂ ಪ್ರಾರಂಭವಾಗಿದೆ ಎನ್ನುತ್ತಾರೆ ಕಡಲ ಜೀವ ಶಾಸ್ತ್ರಜ್ಞ ಡಾ.ವಿ.ಎನ್.ನಾಯಕ. ಸಮುದ್ರ ಅಥವಾ ನದಿಯ ತಟದಲ್ಲಿ ಒಂದು ಸಣ್ಣ ಚಟುವಟಿಕೆಯೂ ಸಮುದ್ರ ಕೊರೆತ ಅಥವಾ ಮರಳು ದಿಬ್ಬ ಸೃಷ್ಟಿಗೆ ಕಾರಣವಾಗುತ್ತದೆ. ಒಂದು ಕಡೆ ದಿಣ್ಣೆ ಸೃಷ್ಟಿಯಾದರೆ, ಇನ್ನೊಂದು ಕಡೆ ಕೊರೆತ ಉಂಟಾಗುತ್ತದೆ ಎನ್ನುತ್ತಾರೆ ಅವರು. ಅಣೆಕಟ್ಟೆ ಎಲ್ಲ ನದಿಗಳ ಹರಿವಿನ ಓಘ ತಗ್ಗುತ್ತದೆ. ಅಂಥ ನದಿಗಳ ಅಳಿವೆ ಪ್ರದೇಶದಲ್ಲಿ ಹೂಳು ತುಂಬುತ್ತದೆ. ಹೊನ್ನಾವರದಲ್ಲಿ ಶರಾವತಿ ನದಿ ಅಳಿವೆ ಪ್ರದೇಶದಲ್ಲೂ ಸದಾ ಹೂಳು ತುಂಬಲು ಇದೇ ಕಾರಣ. ಶರಾವತಿ ನದಿಯ ಅಳಿವೆ ಪ್ರದೇಶದಲ್ಲಿ ಒಂದಿಡೀ ಊರೇ ಕೊಚ್ಚಿ ಹೋಗಿ ಪರ್ಯಾಯವಾಗಿ ಮತ್ತೊಂದೆಡೆ ಜಾಗ ಸೃಷ್ಟಿಯಾಗಿದೆ. ಇಲ್ಲೂ ಅದೇ ರೀತಿ ಆದರೆ ಅಚ್ಚರಿ ಇಲ್ಲ. ನದಿ ತಟದಲ್ಲಿ ಸೇತುವೆ, ಬಂಡ್ ನಿರ್ವಣ, ಮರಳುಗಾರಿಕೆ ಈ ಎಲ್ಲವೂ ಮರಳಿನ ದಿಬ್ಬ ನಿರ್ವಣಕ್ಕೆ ಕಾರಣ ಎಂಬುದು ಅವರ ಅಭಿಮತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net