ಕೋಡಿ ಹರಿಯಿತು ಉಣಕಲ್ಲ ಕೆರೆ

h17-Unkal 2
Published on

ಹುಬ್ಬಳ್ಳಿ: ಕಳೆದ 23 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರ ಹಾಗೂ ಸುತ್ತಲಿನ ಗ್ರಾಮಗಳ 6 ಮನೆಗಳು ಭಾಗಶಃ ಬಿದ್ದಿವೆ. ಹುಬ್ಬಳ್ಳಿಯ ಸಿದ್ದವೀರಪ್ಪನಪೇಟೆಯ ಟುಮಕೂರು ಓಣಿಯಲ್ಲಿ 1 ಮನೆ, ತಾಲೂಕಿನ ಸುಳ್ಳ ಗ್ರಾಮದಲ್ಲಿ 2, ಶೆರೇವಾಡ, ಪರಸಾಪುರ ಹಾಗೂ ಕೊಟಗುಣಸಿ ಗ್ರಾಮಗಳಲ್ಲಿ ತಲಾ ಒಂದು ಮನೆಗಳು ಬಿದ್ದಿವೆ.

ಗ್ರಾಮೀಣ ಪ್ರದೇಶದ ಮಣ್ಣಿನ ಮನೆಗಳ ಮೇಲ್ಚಾವಣಿ ಮಳೆ ನೀರಿನಿಂದ ಸೋರುತ್ತಿದ್ದು, ಮನೆ ಬೀಳುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ಮನೆಗಳನ್ನು ರಕ್ಷಿಸುವುದಕ್ಕಾಗಿ ಗೋಡೆಗಳಿಗೆ ತಾಡಪತ್ರಿಗಳನ್ನು ಹೊದಿಸಿದ್ದಾರೆ.

ಸತತ ಸುರಿಯುತ್ತಿರುವ ಮಳೆಯಿಂದಾಗಿ ಉಣಕಲ್ ಕೆರೆ ತುಂಬಿದ್ದು, ಕೋಡಿ ಹರಿಯುತ್ತಿದೆ. ತೋಳನಕೆರೆ, ರಾಯನಾಳ ಕೆರೆ, ಸಂತೋಷ ನಗರ ಕೆರೆ, ಗೋಕುಲ ಗ್ರಾಮದ ಕೆರೆಗಳೂ ತುಂಬಿವೆ. ನಾಲಾಗಳಲ್ಲಿ ನೀರಿನ ಹರಿವು ಹೆಚ್ಚಿದೆ.

ನಗರದ ಬಿಡ್ನಾಳ, ಹೆಗ್ಗೇರಿ, ಹಳೇ ಹುಬ್ಬಳ್ಳಿ, ಕೇಶ್ವಾಪುರ ಸೇರಿ ವಿವಿಧೆಡೆಯ ಡಾಂಬರ್ ರಸ್ತೆಗಳ ಮಧ್ಯೆ ಹೊಂಡಗಳು ಬಿದ್ದಿವೆ. ರಸ್ತೆ ಮಧ್ಯೆ ನೀರು ನಿಂತಿರುವುದರಿಂದ ಜನ ಹಾಗೂ ವಾಹನ ಸಂಚಾರ ದುಸ್ತರವಾಗಿದೆ. ಡಾಂಬರ್ ಕಾಣದ ರಸ್ತೆಗಳು ಕೆಸರಿನಿಂದ ಕೂಡಿದ್ದು, ಜಾರಿ ಬೀಳುವ ಆತಂಕದಿಂದಲೇ ಜನರು ರಸ್ತೆ ದಾಟುತ್ತಿದ್ದಾರೆ. ನಗರದ ಹೊರ ಭಾಗದಲ್ಲಿರುವ ಬಡಾವಣೆಗಳ ರಸ್ತೆಗಳು ಸಂಪೂರ್ಣ ಕೆಸರಿನಿಂದ ಆವೃತ್ತಗೊಂಡಿವೆ.

ಶ್ರೀನಗರ ಕ್ರಾಸ್, ನವನಗರದ ಕೆಎಚ್​ಬಿ ಕಾಲನಿಗಳಲ್ಲಿ ಮಳೆ ನೀರು ನಿಂತಿದ್ದರಿಂದ ಕೆರೆ ನಿರ್ವಣಗೊಂಡಂತಾಗಿದೆ. ದಾಜಿಬಾನಪೇಟೆ, ದುರ್ಗದಬೈಲ್ ವೃತ್ತದಿಂದ ಶಹಾ ಬಜಾರ್ ಮಾರ್ಗ, ಮೂರುಸಾವಿರ ಮಠದ ಎದುರಿನ ರಸ್ತೆ, ಸ್ಟೇಶನ್ ರಸ್ತೆಗಳಲ್ಲಿ ಸ್ಮಾರ್ಟ್​ಸಿಟಿ ಯೋಜನೆಯಡಿ ವಿವಿಧ ಕಾಮಗಾರಿ ನಡೆಯುತ್ತಿರುವುದರಿಂದ ಇಲ್ಲಿನ ರಸ್ತೆಗಳ ಡಾಂಬರ್ ಕಿತ್ತು ಹೋಗಿದೆ. ರಸ್ತೆ ತುಂಬ ಮಣ್ಣು ಹರಡಿ ರಸ್ತೆ ಕೆಂಪು ಬಣ್ಣಕ್ಕೆ ತಿರುಗಿದೆ. ಗೋಪನಕೊಪ್ಪ, ಕುಸುಗಲ್ ರಸ್ತೆ, ಸುಳ್ಳ ರಸ್ತೆ, ಮಂಟೂರ ರಸ್ತೆ, ಹಳೇ ಹುಬ್ಬಳ್ಳಿ, ಈಶ್ವರ ನಗರ ಸೇರಿ ವಿವಿಧೆಡೆ ಮರಗಳು ಬಿದ್ದಿದ್ದು, ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದಾರೆ.

ತಗ್ಗು ಪ್ರದೇಶದ ಮನೆಗಳು, ಅಪಾರ್ಟ್​ವೆುಂಟ್​ಗಳ ನೆಲ ಮಹಡಿಗೆ ಮಳೆ ನೀರು ನುಗ್ಗಿದೆ. ಬಿಆರ್​ಟಿಎಸ್ ಕಾರಿಡಾರ್​ನಲ್ಲಿಯೂ ಮಳೆ ನೀರು ನಿಂತಿದೆ. ಛಬ್ಬಿ ಗ್ರಾಮದ ಸುತ್ತ ಅತಿ ಹೆಚ್ಚು ಮಳೆ ಸುರಿದಿದ್ದು, ಅಲ್ಲಿನ ಮಳೆಮಾಪನ ಕೇಂದ್ರದಲ್ಲಿ 33 ಮಿ.ಮೀ. ನಷ್ಟು ಮಳೆ ಪ್ರಮಾಣ ದಾಖಲಾಗಿದೆ. ಲಾಕ್​ಡೌನ್ ವಿನಾಯಿತಿ ಅವಧಿಯಲ್ಲಾದರೂ ಒಂದಿಷ್ಟು ವ್ಯಾಪಾರ ಮಾಡಿಕೊಳ್ಳಬೇಕೆಂದು ಬೆಳಗ್ಗೆಯಿಂದ ರಸ್ತೆಯ ಇಕ್ಕೆಲಗಳಲ್ಲಿ ಕುಳಿತಿದ್ದ ತರಕಾರಿ, ಹೂವು, ಹಣ್ಣು ಮಾರಾಟಗಾರರು ಮಳೆಯಿಂದಾಗಿ ತೊಂದರೆ ಅನುಭವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net