

ಗಜೇಂದ್ರಗಡ: ಕೋಟೆನಾಡಿನ ಗುಡ್ಡದಲ್ಲಿ ಬಿಸಿಲ ಝುಳದಿಂದಾಗಿ ಎಲೆಗಳು ಉದುರಿ ಮರಗಳೆಲ್ಲ ಅಸ್ಥಿಪಂಜರದಂತಾಗಿವೆ. ಆದರೆ, ಮುತ್ತುಗದ ಮರ ಮಾತ್ರ ಎಲೆ ಕಳಚಿ ಹೂಬಿಟ್ಟು ಸೌಂದರ್ಯ ಸೂಸುತ್ತಿದೆ. ಪರಿಸರ ಪ್ರಿಯರ ಕಣ್ಮನ ಸೆಳೆಯುತ್ತಿವೆ.
ವೃಕ್ಷ ರಾಜ ಎಂದೇ ಮನ್ನಣೆ ಗಳಿಸಿರುವ ಕೆಲವು ಮರಗಳ ಪೈಕಿ ಮುತ್ತುಗವು ಒಂದು. ಹತ್ತಿರಕ್ಕೆ ಹೋದಂತೆ ಅದರ ಸೌಂದರ್ಯ ಅನಾವರಣಗೊಳ್ಳುತ್ತದೆ. ಎಲೆ ಉದುರಿದ ಮರದಲ್ಲಿ ಹೂವಷ್ಟೇ ಕಾಣಿಸುತ್ತದೆ. ಮರ ಸಮೀಪಿಸುತ್ತಿದ್ದಂತೆ ಜೇನು ನೊಣಗಳ ಝೇಂಕಾರ. ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತದೆ. ಹಕ್ಕಿ, ಜೇನುಗಳು ಹೂವಿನ ಮೇಲೆ ಹಾರುತ್ತಾ, ಮಧು ಪಾತ್ರೆಗೆ ಲಗ್ಗೆ ಹಾಕುತ್ತವೆ. ಎಂದಿನಂತೆ ಈ ಬಾರಿಯೂ ಜೇನ್ನೊಣಗಳು ವಲಸೆ ಬಂದಿವೆ. ಮುತ್ತುಗದ ಮಧು ಹೀರಲು ಗಿಳಿ, ಗೊರವಂಕ, ಕಬ್ಬಕ್ಕಿ, ಕೊಕ್ಕರೆಯಂತಹ ಹಕ್ಕಿಗಳು ಕಾಣಿಸಿಕೊಂಡಿವೆ.
ಮುತ್ತುಗವನ್ನು ಸಂಸ್ಕೃತದಲ್ಲಿ ಪಲಾಷ (ರಕ್ತ ಪುಷ್ಪಕ) ಎಂದು ಕರೆಯಲಾಗುತ್ತದೆ. ಮಾಗಿ ಕಾಲದಲ್ಲಿ ಈ ಮರದ ಎಲೆಗಳೆಲ್ಲ ಉದುರಿ ಸಂಪೂರ್ಣ ಪುಷ್ಪದಿಂದ ಕೂಡಿರುತ್ತದೆ. ಈ ದೃಶ್ಯ ನಯನ ಮನೋಹರವಾಗಿರುತ್ತದೆ. ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಮುತ್ತುಗದ ಹೂವುಗಳು ಸೃಷ್ಟಿಸುವ ಸೊಬಗು ಅನನ್ಯ. ಯಜ್ಞ ಯಾಗಾದಿಗಳಲ್ಲಿಯೂ ಇದನ್ನು ಬಳಸುವುದರಿಂದ ಇದಕ್ಕೆ ಬ್ರಹ್ಮ ವೃಕ್ಷ ಎಂಬ ಹೆಸರೂ ಇದೆ. ಆಂಧ್ರದಲ್ಲಿ ಶಿವರಾತ್ರಿಯಂದು ಶಿವನಿಗೆ ಈ ಹೂವುಗಳನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಮಳೆ ಭವಿಷ್ಯ: ಕೃಷಿಕರು ಮತ್ತು ಮುತ್ತುಗದ ಮರದ ನಡುವೆ ಅವಿನಾಭಾವ ಸಂಬಂಧ ಇದೆ. ಬಹುತೇಕ ಈ ಮರದ ಹೂವು ಸುಗ್ಗಿ ಕಾಲದಲ್ಲಿ ಅರಳಿ ನಿಲ್ಲುತ್ತದೆ. ಇದರ ಹೂವುಗಳು ಧಾನ್ಯ ರಾಶಿಯ ಪೂಜೆಗೆ ಅತಿ ಶ್ರೇಷ್ಠ. ಕೆಲ ರೈತರಿಗೆ ಮುಂದಿನ ಮುಂಗಾರು ಮತ್ತು ಹಿಂಗಾರು ಮಳೆ ಕುರಿತು ಈ ಮುತ್ತುಗ ಮರ ಕಾರ್ಣಿಕ ಹೇಳುತ್ತದೆ. ಮರದಲ್ಲಿ ಹೂವು ಸಮೃದ್ಧವಾಗಿದ್ದರೆ ಮಳೆ ಚೆನ್ನಾಗಿ ಆಗುತ್ತದೆ ಎಂದು ತಿಳಿಯುತ್ತಾರೆ.
ಔಷಧಿ ಸಸ್ಯವಾಗಿಯೂ ಬಳಕೆ: ಮುತ್ತಗದ ಮರದ ಎಲೆ ಚಿಗುರಿನ ತಂಬುಳಿಯ ರುಚಿ ಅದ್ಬುತ. ಎಲೆಗಳನ್ನು ಊಟದ ಎಲೆಗಳಾಗಿ (ಪತ್ರೋಳಿ), ಟೊಂಗೆಯ ರಸವನ್ನು ಬಟ್ಟೆಗೆ ಬಣ್ಣ ಹಾಕಲು, ಹೋಳಿ ಹುಣ್ಣಿಮೆಯ ಬಣ್ಣಕ್ಕಾಗಿ ಬಳಸುತ್ತಾರೆ. ವಾತರೋಗ, ಹೊಟ್ಟೆನೋವು, ಚರ್ಮರೋಗಗಳಿಗೆ ರಾಮಬಾಣ. ಕಾಂಡದಿಂದ ಸುರಿಯುವ ಅಂಟಿನಲ್ಲೂ ಔಷಧ ಗುಣವಿದೆ. ಇದರ ತೊಗಟೆ ಅಲ್ಸರ್ ನಿವಾರಣೆಗೆ, ಎಲೆ ಹೂವು ಮೈ-ಕೈ ತುರುಕಿಗೆ ಹಾಗೂ ಚರ್ಮರೋಗಕ್ಕೆ ಮದ್ದಾಗಿದೆ. ಬೀಜದಿಂದ ಎಣ್ಣೆ ಉತ್ಪಾದಿಸಲಾಗುತ್ತದೆ ಎನ್ನುತ್ತಾರೆ ಆಯುರ್ವೆದ ಪಂಡಿತರಾದ ಜಗನ್ನಾಥ ಅಕ್ಕಸಾಲಿಗ.
ಹೀಗೆ ಹತ್ತು ಹಲವು ಉಪಯೋಗಕಾರಿಯಾದ ಔಷಧಿಯ ಸಸ್ಯ ತಾಲೂಕಿನ ಗುಡ್ಡ ಹಾಗೂ ಜಿಗೇರಿ, ಬೆಣಸಮಟ್ಟಿ, ಗೌಡಗೇರಿ, ಕುಂಟೋಜಿ, ಬೈರಾಪೂರ ಗ್ರಾಮದ ಕೆಲ ರೈತರ ಹೊಲದ ಬದುವಿನಲ್ಲಿ ಕಾಣಸಿಗುತ್ತದೆ.
ಮೂಲವ್ಯಾಧಿ ತೊಂದರೆಯಿಂದ ಬಳಲುವವರು ಎಳೆ ಎಲೆಯನ್ನು ಮಜ್ಜಿಗೆಯಲ್ಲಿ ಅರೆದು ಕುಡಿಯಬೇಕು. ಗರ್ಭಿಣಿಯರು ಪ್ರತಿ ದಿನ ಒಂದು ಮುತ್ತುಗದ ಚಿಗುರೆಲೆಯನ್ನು ಹಾಲಿನಲ್ಲಿ ಅರೆದು ಕುಡಿಯುವುದರಿಂದ ಹುಟ್ಟುವ ಮಗುವು ಶಕ್ತಿವಂತವಾಗಿರುತ್ತದೆ. ಬೇಧಿಯಿಂದ ಬಳಲುವವರು ತೊಗಟೆಯ ಕಷಾಯ ಕುಡಿಯಬೇಕು. ಚೇಳು ಕಚ್ಚಿದಾಗ ಮುತ್ತುಗದ ಬೀಜವನ್ನು ಎಕ್ಕದ ಹಾಲಿನಲ್ಲಿ ಅರೆದು ಹಚ್ಚಿದರೆ ವಿಷದ ಬಾಧೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಆಯುರ್ವೆದ ಪಂಡಿತ ಜಗನ್ನಾಥ ಅಕ್ಕಸಾಲಿಗ.
ಮುತ್ತುಗದ ಮರದಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ದರೂ, ಜನ ಉರುವಲಿಗಾಗಿ ಕಡಿಯುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ, ಮುಂದೊಂದು ದಿನ ಮುತ್ತುಗದ ಹೂಗಳನ್ನು ಚಿತ್ರದಲ್ಲಿ ನೋಡಬೇಕಾಗುತ್ತದೆ. | ಪಿ.ಸಿ.ಹಿರೇಮನಿ, ಸಮಾಜ ಸೇವಕ