

ಶಿವಕುಮಾರ ಶಶಿಮಠ ಗಜೇಂದ್ರಗಡ
ಕರೊನಾ ಭೀತಿಯ ನಡುವೆಯೂ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಣೇಶ ಹಾಗೂ ಮೊಹರಂ ಹಬ್ಬಗಳು ಸಂಭ್ರಮದಿಂದ ನಡೆಯುತ್ತಿವೆ. ಭಾವೈಕ್ಯತೆಗೆ ಹೆಸರುವಾಸಿಯಾಗಿರುವ ಕೋಟೆನಾಡಲ್ಲಿ ಈಗ ಎಲ್ಲೆಂದರಲ್ಲಿ ಹುಲಿವೇಷ, ಕುಣಿತ ಕಂಡುಬರುತ್ತಿದೆ.
ಮೊಹರಂ ಹಬ್ಬದಲ್ಲಿ ಮೈ ತುಂಬ ಬಣ್ಣ ಹಚ್ಚಿಕೊಂಡು ತಮಟೆ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕುತ್ತ ಕಾಣಿಕೆ ಸ್ವೀಕರಿಸುವುದು ಹುಲಿ ವೇಷಧಾರಿಗಳ ಕೆಲಸ. ಮೊಹರಂ ಹಬ್ಬದ ಐದು ದಿನಗಳ ಕಾಲ ಹುಲಿ ಕುಣಿತ ನಿರಂತರವಾಗಿ ನಡೆದೆ ಇರುತ್ತದೆ. ಮಕ್ಕಳು, ಯುವಕರು, ವೃದ್ಧರು ಹುಲಿ ವೇಷದ ಬಣ್ಣ ಹಚ್ಚಿಕೊಂಡು ಹೆಜ್ಜೆ ಹಾಕುವ ದೃಶ್ಯ ಆಕರ್ಷಕವಾಗಿರುತ್ತದೆ.
ಕೆಲವರು ಅಲೈ ದೇವರಿಗೆ ಬೇಡಿಕೊಂಡು ವೇಷ ಧರಿಸಿದರೆ, ಕೆಲವರು ಹುಲಿ ವೇಷ ಧರಿಸಿ ಮೊಹರಂ ಹಬ್ಬದಂದು ಹಣ ಬೇಡುತ್ತಾರೆ. ಮೈತುಂಬ ಕಪ್ಪು ಬಣ್ಣ, ತಲೆ ಮೇಲೆ ಪಿರಾಮಿಡ್ ಆಕಾರದ ಟೋಪಿ, ಸೊಂಟ ಹಾಗೂ ಕಾಲಿಗೆ ಗೆಜ್ಜೆ ಕಟ್ಟಿಕೊಳ್ಳುತ್ತಾರೆ. ಸುತ್ತಿದ ರುಮಾಲನ್ನು ಕೈಯಲ್ಲಿ ಹಿಡಿದು ಗಲ್ಲಿಗಲ್ಲಿಗಳಲ್ಲಿ, ಬಸ್ ನಿಲ್ದಾಣ, ಮಾರುಕಟ್ಟೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಜನರ ಬಳಿ ತೆರಳಿ ಕಾಣಿಕೆ ರೂಪದಲ್ಲಿ ಹಣ ಕೇಳುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು ಯುವಕರು, ವೃದ್ಧರು ವೇಷ ಹಾಕುತ್ತಾರೆ. ಮೊಹರಂ ಹಬ್ಬದಂದು ಹಲಗೆ ಬಾರಿಸುತ್ತ ಸಾರ್ವಜನಿಕ ಸ್ಥಳಗಳಲ್ಲಿ ಹುಲಿ ಕುಣಿತ ಪ್ರದರ್ಶಿಸುವುದು ವಾಡಿಕೆ.
ಕಡಿಮೆಯಾಗಿದೆ ಬಣ್ಣ ಹಚ್ಚಿಸಿಕೊಳ್ಳುವವರ ಸಂಖ್ಯೆ
ಹುಲಿ ವೇಷ ಧರಿಸಿಕೊಳ್ಳುವ ಜನರಿಗೆ ಮೈ ತುಂಬ ಬಣ್ಣ ಬಳಿಯಲು ಗಜೇಂದ್ರಗಡದ ಮುರ್ತಜಾಸಾಬ್ ಉಟಗೂರ ಕಲಾವಿದ ಕುಟುಂಬಕ್ಕೆ ಎಲ್ಲಿಲ್ಲದ ಬೇಡಿಕೆ. ಈ ಕುಟುಂಬ 30 ವರ್ಷಗಳಿಂದ ಕಾರ್ಯದಲ್ಲಿ ತೊಡಗಿಕೊಂಡಿದೆ. ಇವರಿಗೆ ಮೊಹರಂ ಹಬ್ಬ ಸ್ವಲ್ಪ ಮಟ್ಟಿಗೆ ನೆರವಾಗಿದೆ. ಪ್ರತಿವರ್ಷವೂ ಸುತ್ತಮುತ್ತಲಿನ ನೂರಾರು ಜನರಿಗೆ ಹುಲಿಯನ್ನು ಹೋಲುವ ಬಣ್ಣ ಬಳಿದು ಜೀವನದ ಬಂಡಿ ಸಾಗಿಸುತ್ತಿದ್ದಾರೆ. ಆದರೆ, ಈ ಬಾರಿ ಕರೊನಾ ನಿಮಿತ್ತ ಹುಲಿ ವೇಷದ ಬಣ್ಣ ಹಚ್ಚಿಸಿಕೊಳ್ಳುವವರ ಸಂಖ್ಯೆ ಅರ್ಧದಷ್ಟು ಕುಸಿದಿದೆ.