ಕೋಟೆ ನಾಡು ಗಡ ಗಡ...

15 GAJENDRAGAD 3..
Published on

ಗಜೇಂದ್ರಗಡ: ಪ್ರಸಿದ್ಧ ಕೋಟೆನಾಡು ಗಜೇಂದ್ರಗಡ ಮತ್ತು ದಕ್ಷಿಣ ಕಾಶಿ ಕಾಲಕಾಲೇಶ್ವರ ದೇಗುಲ ಬಳಿಯ ಕೆಲ ಗ್ರಾಮಗಳು ಪ್ರತಿದಿನ ರಾತ್ರಿ ನಡುಗುತ್ತಿವೆ. ಮನೆಗಳು ಬಿರುಕು ಬಿಡುತ್ತಿವೆ. ಗುಡ್ಡಗಾಡುಗಳಲ್ಲಿರುವ ವನ್ಯಜೀವಿಗಳು ಪಲಾಯನ ಮಾಡುತ್ತಿವೆ.

ಇದು ಸಮೀಪದ ವದೇಗೋಳ ಗ್ರಾಮದ ಸರ್ಕಾರಿ ಜಾಗದ ಸರ್ವೆ ನಂ. 21ರಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಸೃಷ್ಟಿಯಾಗಿರುವ ದುಸ್ಥಿತಿ.

ವದೇಗೋಳ ಗ್ರಾಮವು ಪಟ್ಟಣದಿಂದ ಕೇವಲ 300 ಮೀಟರ್ ದೂರದಲ್ಲಿದೆ. ವದೇಗೋಳ ಕೆರೆ 100 ಮೀ, ಜಿಗೇರಿ ಕೆರೆ 300 ಮೀ, ಕುಂಟೋಜಿ 1 ಕಿ.ಮೀ, ಕೃಷ್ಣಾಪೂರ 1 ಕಿ.ಮೀ, ಮ್ಯಾಕಲಝುರಿ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಕಾಲಕಾಲೇಶ್ವರ 2 ಕಿ.ಮೀ ಅಂತರದಲ್ಲಿವೆ. ಹೀಗಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸರ್ಕಾರಿ ಜಾಗದ 5 ಎಕರೆಯಲ್ಲಿ ಎಲ್ಲ ಕಾನೂನುಗಳನ್ನು ಗಾಳಿಗೆ ತೂರಿ ರೋಣದ ಮಾಜಿ ಶಾಸಕರೊಬ್ಬರ ಮಗನಿಗೆ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಆದರೆ, ಜಿಲೆಟಿನ್ ಸ್ಪೋಟದಿಂದ ಕೆರೆಯಲ್ಲಿನ ಜಲಚರ ಪ್ರಾಣಿ, ವನ್ಯಜೀವಿ ಪ್ರಾಣಿಗಳಿಗೆ ತೊಂದರೆಯಾಗಿದೆ. ಸುತ್ತಲಿನ ಮನೆಗಳು ಬಿರುಕು ಬಿಟ್ಟು, ಜನಜೀವನ ಅಸ್ತವ್ಯಸ್ತವಾಗಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಭಾರಿ ಸ್ಪೊಟಕ್ಕೆ ನಡುಗುತ್ತಿವೆ ಹಳ್ಳಿಗಳು: ಎರಡಿಂಚು ಸುತ್ತಳತೆಯಂತೆ 10 ಅಡಿ ರಂಧ್ರ ಕೊರೆದು ಜಿಲಿಟನ್ ಹಾಕಿ ಕಲ್ಲು ಬಂಡೆ ಸ್ಪೋಟಿಸಬೇಕು ಎನ್ನುತ್ತದೆ ನಿಯಮ. ಆದರೆ, ಪ್ರತಿ ದಿನ ಹಗಲು-ರಾತ್ರಿ ಎನ್ನದೆ ಬಂಡೆ ಸಿಡಿಸಲು ಬೋರ್​ವೆಲ್ ಡ್ರಿಲ್​ನಿಂದ 50ರಿಂದ 100 ಅಡಿ ಆಳ ಕೊರೆದು ಸ್ಪೊಟಿಸಲಾಗುತ್ತಿದೆ. ಈ ಆಳದ ರಂಧ್ರ ಪೂರ್ತಿ ಜಿಲೆಟಿನ್ ತುಂಬಿ ಕಲ್ಲು ಸ್ಪೋಟಿಸುವುದರಿಂದ ಸುತ್ತಲಿನ ಮೂರ್ನಾಲ್ಕು ಕಿ.ಮೀ.ವರೆಗೂ ಭೂಮಿ ಕಂಪಿಸುತ್ತದೆ. ಪ್ರತಿ ದಿನ 200ಕ್ಕೂ ಅಧಿಕ ಟಪ್ಪರ್​ಗಳಲ್ಲಿ ಜೆಲ್ಲಿ, ಎಮ್ ಸ್ಯಾಂಡ್, ಕಡಿಯನ್ನು ಸಾಗಿಸಲಾಗುತ್ತಿದೆ. ಇದರಿಂದ ಸುತ್ತಲಿನ ಹತ್ತಾರು ಗ್ರಾಮಗಳು ನಿತ್ಯ ರಾತ್ರಿ ನಡಗುತ್ತವೆ. ಮನೆಯಲ್ಲಿರುವ ಪಾತ್ರೆ ಸಾಮಗ್ರಿಗಳು ಅಲುಗಾಡಿ ಬೀಳುತ್ತಿವೆ. ಗೋಡೆಗಳು ಬಿರುಕು ಬಿಟ್ಟು ಬಡವರ ಮನೆಗಳು ನೆಲಕ್ಕುರುಳುವ ಹಂತ ತಲುಪಿವೆ.

ಅಂತರ್ಜಲಕ್ಕೆ ಹೊಡೆತ: ವದೇಗೋಳ, ಜಿಗೇರಿ, ಕುಂಟೋಜಿ, ಮ್ಯಾಕಲಝುರಿ, ಕಣವಿ, ಕಾಲಕಾಲೇಶ್ವರ ಭಾಗದ ರೈತರನ್ನು ಕಲ್ಲಿನ ಕ್ವಾರಿ ಕಷ್ಟಕ್ಕೆ ನೂಕಿದೆ. ಅಪಾರ ಪ್ರಮಾಣದ ಜಿಲೆಟಿನ್ ಸ್ಪೋಟದಿಂದ ಭೂಮಿ ಅದುರಿ ಜಲಮೂಲಗಳು ದಾರಿ ಬದಲಿಸಿವೆ. ಪರಿಣಾಮ ಸುತ್ತಲಿನ ರೈತರು ಕೊರೆಸಿದ ಹಲವಾರು ಕೊಳವೆ ಬಾವಿಗಳಲ್ಲಿ ಹಿಂದಿನಷ್ಟು ನೀರಿಲ್ಲ. ಜಿಗೇರಿ ಕೆರೆ ಹಾಗೂ ವದೇಗೊಳ ಕೆರೆಯಲ್ಲಿರುವ ಜಲಚರಗಳನ್ನು ಹಾಗೂ ಕೆರೆಯನ್ನು ರಕ್ಷಿಸಬೇಕಿದೆ ಎನ್ನುತ್ತಾರೆ ಜೆಡಿಎಸ್ ಮುಖಂಡ ಪಿ.ಸಿ.ಹಿರೇಮನಿ.

ವನ್ಯಜೀವಿಗಳ ವಿನಾಶ: ಗಜೇಂದ್ರಗಡ ಸುತ್ತಲಿನ 25 ಕಿ.ಮೀ ವ್ಯಾಪ್ತಿಯಲ್ಲಿ ಬೃಹತ್ ಗುಡ್ಡಗಾಡು ಪ್ರದೇಶವಿದೆ. ಚಾರಣ ಪ್ರಿಯರಿಗೆ ಮತ್ತು ಪ್ರಕೃತಿ ಆರಾಧಕರಿಗೆ ರಸದೌತಣ ನೀಡುವ ತಾಣವಾಗಿದೆ. ಕಲ್ಲು ಗಣಿಗಾರಿಕೆಯಿಂದ ವೃದ್ಧರಿಗೆ ಮತ್ತು ಚಿಕ್ಕಮಕ್ಕಳಿಗೆ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಈ ಭಾಗದಲ್ಲಿರುವ ನವಿಲು, ಮೊಲ, ಜಿಂಕೆ ಮತ್ತಿತ್ತರ ಪ್ರಾಣಿ ಪಕ್ಷಿಗಳು ವಿನಾಶದ ಅಂಚಿನಲ್ಲಿವೆ.

ಕ್ರಷರ್ ಹಾಗೂ ಕಲ್ಲುಕ್ವಾರಿ ಮಾಲೀಕರು ಸುತ್ತಲಿನ ಕೆಲ ರೈತರಿಗೆ ವರ್ಷಕ್ಕೊಮ್ಮೆ 10 ಸಾವಿರ ರೂ. ಬಿಡಿಗಾಸು ಕೈಗಿಟ್ಟು ತಮ್ಮ ವಿರುದ್ದ ಯಾರೊಬ್ಬರೂ ಧ್ವನಿ ಎತ್ತಬಾರದು ಎಂದು ಒತ್ತಡ ಹೇರಲಾಗುತ್ತಿದ್ದಾರೆ. ಕಲ್ಲಿನ ಕ್ವಾರಿ, ಕ್ರಷರ್ ಪ್ರಾರಂಭದಾಗಿನಿಂದ ಸುತ್ತಲಿನ ರೈತರ ಕೊಳವೆಬಾವಿಗಳು ಕೈಕೊಟ್ಟಿವೆ. ಬೆಳೆಗಳ ಮೇಲೆ ಕಲ್ಲಿನ ಪುಡಿನ ಬಿದ್ದು ಹಾಳಾಗುತ್ತಿವೆ. | ಮಲ್ಲಪ್ಪ, ರೈತ

ನೀರಿರುವುದೇ ಕಲ್ಲಿನ ಪದರಿನಲ್ಲಿ. ಅಪಾರ ಪ್ರಮಾಣದಲ್ಲಿ ಜಿಲೆಟಿನ್ ಹಾಕಿ ಸ್ಫೋಟ ಮಾಡುವುದರಿಂದ ನೀರು ದಿಕ್ಕು ಬದಲಾಯಿಸುತ್ತದೆ. ಜಲ ಮೂಲಕ್ಕೆ ಪೆಟ್ಟು ನಿಡುವ ಸಂಗತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ತಜ್ಞರ ತಂಡ ಪರಿಶೀಲಿಸಬೇಕು. ಕೊಳವೆ ಬಾವಿ, ಬೆಳೆಗಳಿರುವ ಜಮೀನುಗಳಿಂದ ಸಾಧ್ಯವಾದಷ್ಟು ದೂರ ಇರುವ ಕಡೆ ಕಲ್ಲು ಗಣಿಗಾರಿಕೆ ಅನುಮತಿ ನೀಡಬೇಕು. | ಪ್ರಭುರಾಜ ಎಂ, ಜಲಮೂಲ ತಜ್ಞ

ಗಜೇಂದ್ರಗಡ ಬಳಿ ವದೇಗೋಳದಲ್ಲಿ ಕ್ರಷರ್ ಘಟಕ ಸ್ಥಾಪಿಸಲು 15 ದಿನಗಳ ಹಿಂದೆ ಅನುಮತಿ ನೀಡಲಾಗಿದೆ. ಇಲಾಖೆಯ ಭೂವಿಜ್ಞಾನಿಯೊಬ್ಬರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರವೇ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗಿದೆ. | ರಾಜೇಶ, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂಗರ್ಭ ಇಲಾಖೆ, ಗದಗ

ಗಜೇಂದ್ರಗಡ ಬಳಿ ವದೇಗೋಳದಲ್ಲಿ ಕ್ರಷರ್ ಘಟಕ ಸ್ಥಾಪಿಸಲು 15 ದಿನಗಳ ಹಿಂದೆ ಅನುಮತಿ ನೀಡಲಾಗಿದೆ. ಇಲಾಖೆಯ ಭೂವಿಜ್ಞಾನಿಯೊಬ್ಬರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರವೇ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗಿದೆ. | ರಾಜೇಶ, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂಗರ್ಭ ಇಲಾಖೆ, ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net