ಕೋಟಿತೀರ್ಥ ಸ್ವಚ್ಛತೆಗೆ ಆದೇಶ

2gkn1-a-
Published on

ಗೋಕರ್ಣ: ದಶಕಗಳಿಂದ ತ್ಯಾಜ್ಯಮಯವಾದ ಇಲ್ಲಿನ ಪುರಾಣ ಪ್ರಸಿದ್ಧ ಕೋಟಿತೀರ್ಥವನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಲು ಹೊಸ ಯೋಜನೆಯೊಂದಕ್ಕೆ ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸ್ಥಳದಲ್ಲಿಯೇ ಆದೇಶಿಸಿದ್ದಾರೆ.

ಖಾಸಗಿ ಧಾರ್ವಿುಕ ಕಾರ್ಯಕ್ಕಾಗಿ ಸೋಮವಾರ ಇಲ್ಲಿಗೆ ಆಗಮಿಸಿದ್ದ ಸಚಿವರಿಗೆ ಸ್ಥಳೀಯ ಬ್ರಾಹ್ಮಣ ಪರಿಷತ್, ಪಟ್ಟವಿನಾಯಕ ಗೆಳೆಯರ ಬಳಗ ಮತ್ತು ಇತರ ಸಂಘಟನೆ ವತಿಯಿಂದ ಮನವಿ ನೀಡಿ ಕೋಟಿತೀರ್ಥದ ದುರವಸ್ಥೆ ಸರಿಪಡಿಸಿ ಯಾತ್ರಿಕರಿಗೆ ಅನುಕೂಲ ಮಾಡಿಕೊಡಲು ಪರಿಷತ್ ಅಧ್ಯಕ್ಷ ವೇ.ಚಂದ್ರಶೇಖರ ಅಡಿ ಅವರ ನೇತೃತ್ವದಲ್ಲಿ ವೈದಿಕರು ಮನವಿ ನೀಡಿದರು.

ಈ ವೇಳೆ ಕೋಟಿತೀರ್ಥಕ್ಕೆ ಭೇಟಿಯಿತ್ತು ಅಲ್ಲಿನ ಪರಿಸ್ಥಿತಿಯನ್ನು ವೀಕ್ಷಿಸಿ ಬೇಸರ ವ್ಯಕ್ತಪಡಿಸಿದರು. ತಕ್ಷಣ ಜಿಪಂ ಸಿಇಒ ಎಂ.ರೋಶನ್ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿ ಕೋಟಿತೀರ್ಥ ಅಭಿವೃದ್ಧಿ ಬಗ್ಗೆ ತಯಾರಿಸಲಾದ 6.5ಕೋಟಿ ರೂ. ಯೋಜನೆ ಬಗ್ಗೆ ರ್ಚಚಿಸಿದರು.

ಮೊದಲು ಸ್ವಚ್ಛತೆ ಆಗಲಿ: ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ ಅವರು, ಕೋಟಿತೀರ್ಥ ಯಾತ್ರಿಕರ ಉಪಯೋಗಕ್ಕೆ ದೊರಕದಿರುವುದು ವಿಷಾದನೀಯ. ಮೊದಲು ಈ ತೀರ್ಥವನ್ನು ಜನೋಪಯೋಗಕ್ಕೆ ಅನುಕೂಲವಾಗುವಂತೆ ಶುಚಿಗೊಳಿಸಲು ಆದ್ಯತೆ ನೀಡಲಾಗುವುದು. ತಕ್ಷಣದಲ್ಲಿ ಕೋಟಿತೀರ್ಥದ ನೀರು ಹೊರಸಾಗಿಸಿ ಇದನ್ನು ಪೂರ್ಣವಾಗಿ ಸ್ವಚ್ಛಗೊಳಿಸಲು ಜಿಪಂ ಸಿಇಒ ಅವರಿಗೆ ಆದೇಶಿಸಲಾಗಿದೆ. ಇದಕ್ಕೆ 2.5 ಕೋಟಿ ರೂ. ವೆಚ್ಚ ಆಗಬಹುದು ಎಂದು ಇಂಜಿನಿಯರಿಂಗ್ ವಿಭಾಗ ಅಂದಾಜಿಸಿದೆ. ಇದಕ್ಕೆ ಕೂಡಲೆ ಮಂಜೂರಿ ನೀಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಿದ್ಧ ಮಾಡಿರುವ ಯೋಜನೆಯಲ್ಲಿರುವ ಉಳಿದ ಕಾಮಗಾರಿಯ ಬಗ್ಗೆ ನಂತರ ನಿರ್ಧರಿಸಲಾಗುವುದು ಎಂದು ಹೇಳಿದರು.

ಈ ವೇಳೆ ಶಾಸಕ ದಿನಕರ ಶೆಟ್ಟಿ, ಜಿಪಂ ಇಂಜಿನಿಯರ್ ಡಿ.ಆರ್. ನಾಯಕ, ತಾಪಂ ಸದಸ್ಯ ಮಹೇಶ ಶೆಟ್ಟಿ, ತಾಪಂ ಇಒ ಸಿ.ಟಿ.ನಾಯ್ಕ,ಗ್ರಾಪಂ ಆಡಳಿತಾಧಿಕಾರಿ ಆರ್.ಜಿ.ಗುನಗಿ, ಪಿಡಿಒ ವಿನಯಕುಮಾರ, ಗ್ರಾಪಂ ಮಾಜಿ ಉಪಾಧ್ಯಕ್ಷ ಶೇಖರ ನಾಯ್ಕ, ಮಾಜಿ ಸದಸ್ಯ ಗಣಪತಿ ನಾಯ್ಕ, ಎಪಿಎಂಸಿ ಅಧ್ಯಕ್ಷ ರಮೇಶ ಪ್ರಸಾದ, ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ರಾಮು ಕೆಂಚನ್ ಇತರರು ಇದ್ದರು.

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ವೀಕ್ಷಿಸಿದ ಸಚಿವರು...
ಶ್ರೀ ರಾಮಚಂದ್ರಾಪುರ ಮಠದ ಮೂಲ ತಾಣ ಇಲ್ಲಿನ ಅಶೋಕೆಯಲ್ಲಿ ವಾಸ್ತವ್ಯವಿರುವ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಸೋಮವಾರ ಭೇಟಿ ಮಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಶ್ರೀಗಳಿಂದ ಆಶೀರ್ವಾದ ಪಡೆದರು. ತರುವಾಯ ಅವರು ಶ್ರೀಗಳ ಜತೆಗೆ ನಿರ್ಮಾಣ ಹಂತದಲ್ಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಸಂದರ್ಶಿಸಿದರು. ಶ್ರೀಗಳ ನೇತೃತ್ವದಲ್ಲಿ ಸನಾತನ ವಿದ್ಯಾ ಪರಂಪರೆಯ ಪುನರುತ್ಥಾನಕ್ಕೆ ಬದ್ಧವಾದ ನೂತನ ವಿಶ್ವವಿದ್ಯಾಪೀಠದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಬಗ್ಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ವಿಶ್ವವಿದ್ಯಾಪೀಠದ ಸ್ಥೂಲ ವಿವರವನ್ನು ಶ್ರೀಗಳು ಸಚಿವರಿಗೆ ನೀಡಿದರು. ಶಾಸಕ ದಿನಕರ ಶೆಟ್ಟಿ ಮತ್ತು ಇತರರಿದ್ದರು.
ಧಾರ್ವಿುಕ ಕಾರ್ಯ: ಇದಕ್ಕೂ ಮುನ್ನ ಸಚಿವರು ಇಲ್ಲಿನ ಪುರಾಣ ಪ್ರಸಿದ್ಧ ಪಿತೃಸ್ಥಾಲೀಶ್ವರದಲ್ಲಿ ವೇ. ಚಂದ್ರಶೇಖರ ಅಡಿ ಮತ್ತು ವೈದಿಕರ ನೇತೃತ್ವದಲ್ಲಿ ಜರುಗಿದ ಪಿತೃ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net