

ಕೊಳ್ಳೇಗಾಲ: ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕಾಂಶ ಹೆಚ್ಚಿಸಬೇಕಾದ ‘ಮೊಟ್ಟೆ’ ಹೊಡೆದ ಆರೋಪದ ಮೂಟೆ ಹೊರಬಿದ್ದಿದೆ.
ಕೊಳ್ಳೇಗಾಲದ ಸಿಡಿಪಿಒ ನಂಜಮಣಿ ಅವರು ಮೊಟ್ಟೆಗೆ ಸರ್ಕಾರ ನಿಗದಿ ಮಾಡಿರುವ ಹಣಕ್ಕಿಂತ ಕಡಿಮೆ ಹಣ ನೀಡಿದ್ದಾರೆ ಎಂದು ಕಾಮಗೆರೆ ಅಂಗನವಾಡಿ ಕಾರ್ಯಕರ್ತೆ ಸುಂದ್ರಮ್ಮ ದೂರಿದ್ದಾರೆ. ಸಿಡಿಪಿಒ ಕಚೇರಿಯಲ್ಲಿ ಹಣ ಹಂಚಿಕೆಯ ವಿಡಿಯೋ ವೈರಲ್ ಆಗಿದೆ. ಸುಂದ್ರಮ್ಮ ಇದನ್ನು ಮೊಟ್ಟೆ ಹಣ ಹಂಚಿಕೆಗೆ ಸಂಬಂಧಿಸಿದ ವಿಡಿಯೋ ಎಂದಿದ್ದಾರೆ. ಆದರೆ ನಂಜಮಣಿ ಇದು ಪ್ರವಾಸದ ಹಣ ಹಂಚಿಕೆ ವಿಡಿಯೋ ಎನ್ನುತ್ತಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಈ ಪ್ರಕರಣದ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಂಜಮಣಿ ಮತ್ತು ಸುಂದ್ರಮ್ಮ ಅವರ ಹೇಳಿಕೆಗಳನ್ನು ಪಡೆದು ವಿಚಾರಣೆ ನಡೆಸಲಿದ್ದಾರೆ. ಸತ್ಯಾಂಶ ಹೊರಬಂದ ಬಳಿಕ ಈ ಆರೋಪ ನಿಜವೋ ಅಥವಾ ಸುಳ್ಳೋ ಎನ್ನುವುದು ಬಹಿರಂಗಗೊಳ್ಳಲಿದೆ.
ಎಷ್ಟಾಗುತ್ತದೆ ಮೊಟ್ಟೆ ವಿತರಣೆ?: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಜೆ.ಆರ್.ದಿನೇಶ್ ನೀಡಿರುವ ಮಾಹಿತಿ ಪ್ರಕಾರ, ಕೊಳ್ಳೇಗಾಲ ತಾಲೂಕಿನಲ್ಲಿ 206 ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ 2641 ಮಕ್ಕಳಿಗೆ (ವಾರದಲ್ಲಿ 2 ದಿನ) , 705 ಗರ್ಭಿಣಿಯರಿಗೆ(ಪ್ರತಿದಿನ), 805 ಬಾಣಂತಿಯರಿಗೆ(6 ತಿಂಗಳು) ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. 1 ಮೊಟ್ಟೆಗೆ 6 ರೂ. ನಿಗದಿಯಾಗಿದೆ. ಮೊಟ್ಟೆ ಖರೀದಿಯ ಹಣ ಅಂಗನವಾಡಿ ಕೇಂದ್ರದ ಮಟ್ಟದಲ್ಲಿ ಸ್ಥಾಪನೆ ಮಾಡಿರುವ ಬಾಲ ವಿಕಾಸ ಸಮಿತಿಯ ಖಾತೆಗೆ ಜಮೆಯಾಗುತ್ತದೆ. ತಾಲೂಕು ಪಂಚಾಯಿತಿಯಿಂದ ಸಿಡಿಪಿಒಗೆ ಹಣ ತಲುಪಿ ಇವರಿಂದ ಬಾಲ ವಿಕಾಸ ಸಮಿತಿಯ ಖಾತೆಗೆ ಹಣ ಜಮೆಯಾಗುತ್ತದೆ. ಈ ಹಣದ ವಿಚಾರದಲ್ಲಿ ಕೇಳಿಬಂದಿರುವ ಆರೋಪವೇ ಚರ್ಚೆಯ ವಿಷಯವಾಗಿದೆ.
90ಕ್ಕೂ ಹೆಚ್ಚು ಅಪೌಷ್ಟಿಕ ಮಕ್ಕಳು: ಕೊಳ್ಳೇಗಾಲ ತಾಲೂಕಿನಲ್ಲಿ 90ಕ್ಕೂ ಹೆಚ್ಚು ಅಪೌಷ್ಟಿಕ ಮಕ್ಕಳು ಇದ್ದಾರೆ. ಸಚಿವರಾದ ಕೆ.ವೆಂಕಟೇಶ್ ಮತ್ತು ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಮಾಹಿತಿ ನೀಡಿದೆ. 2024-25ನೇ ಸಾಲಿನಲ್ಲಿ ಸಾಧಾರಣ ಕಡಿಮೆ ತೂಕ ಹಾಗೂ ತೀವ್ರ ಅಪೌಷ್ಟಿಕ ಮಕ್ಕಳ ವಿವರವನ್ನು ನೀಡಿದೆ. ಇದರಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 1011 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಕೊಳ್ಳೇಗಾಲ ತಾಲೂಕಿನಲ್ಲಿ 99 ಮಕ್ಕಳು ಇದ್ದಾರೆ. ಈ 99 ಮಕ್ಕಳಲ್ಲಿ 6 ಮಕ್ಕಳು ತೀವ್ರ ಅಪೌಷ್ಟಿಕತೆ ಎದುರಿಸುತ್ತಿದ್ದಾರೆ. 93 ಮಕ್ಕಳು ಸಾಧಾರಣ ಕಡಿಮೆ ತೂಕದಿಂದ ಕೂಡಿವೆ.
ಸಿಡಿಪಿಒ ನಂಜಮಣಿ 1 ಮೊಟ್ಟೆಗೆ 6 ರೂ. ಕೊಡುವ ಬದಲು 4 ರೂ. ನೀಡಿದ್ದಾರೆ. ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಪ್ರವಾಸಕ್ಕೆ ಕೂಡಿಟ್ಟಿದ್ದ ಹಣವನ್ನು ವಾಪಸು ನೀಡಿದ್ದೇನೆ ಎಂದು ಸತ್ಯಕ್ಕೆ ದೂರವಾದ ಮಾತನಾಡುತ್ತಿದ್ದಾರೆ. ಸಂಘಟನೆ ಮುಖಂಡರೊಬ್ಬರ ಮೂಲಕ ನನ್ನೊಂದಿಗೆ ರಾಜಿ ಸಂಧಾನ ಮಾಡಲು ಯತ್ನಿಸಿದ್ದಾರೆ. ನನ್ನ ವಿರುದ್ಧ ಬೇರೆ ಅಂಗನವಾಡಿ ಕಾರ್ಯಕರ್ತೆಯರನ್ನು ಎತ್ತಿಕಟ್ಟಲಾಗುತ್ತಿದೆ. ಮೇಲಾಧಿಕಾರಿಗಳಿಗೂ ನನ್ನ ವಿರುದ್ಧ ದೂರು ನೀಡಲು ಹುನ್ನಾರ ನಡೆಯುತ್ತಿದೆ. ಈ ವಿಚಾರದಲ್ಲಿ ನಾನೂ ಕಾನೂನು ಹೋರಾಟ ಮಾಡಲು ಸಿದ್ಧವಾಗಿದ್ದೇನೆ. ಸುಂದ್ರಮ್ಮ, 6ನೇ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ, ಕಾಮಗೆರೆ ಅಂಗನವಾಡಿ ಕಾರ್ಯಕರ್ತೆ ಸುಂದ್ರಮ್ಮ ಅವರನ್ನು ರಾಜಿ ಸಂಧಾನಕ್ಕೆ ನಾನು ಕರೆದಿಲ್ಲ. ಅವರನ್ನು ಭೇಟಿಯೂ ಆಗಿಲ್ಲ. ದೊಡ್ಡಿಂದುವಾಡಿ ಗ್ರಾಮದ ಅಂಗನವಾಡಿ ಕೇಂದ್ರಗಳ ಪರಿಶೀಲನೆಗೆ ತೆರಳಿದ್ದೆ. ಈ ಪ್ರಕರಣದಲ್ಲಿ ಸರ್ಕಾರ ಕೈಗೊಳ್ಳುವ ತನಿಖೆಯಲ್ಲಿ ನಿಜಾಂಶ ಹೊರಬರಲಿದೆ. ನಂಜಮಣಿ, ಸಿಡಿಪಿಒ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ, ಕೊಳ್ಳೇಗಾಲ. ಸಿಡಿಪಿಒ ನಂಜಮಣಿ ವಿರುದ್ಧ ಅಂಗನವಾಡಿ ಕಾರ್ಯಕರ್ತೆ ಸುಂದ್ರಮ್ಮ ಮಾಡಿರುವ ಆರೋಪದ ಕುರಿತು ವಿಚಾರಣೆ ಮಾಡುತ್ತೇನೆ. ವಾಸ್ತವಾಂಶ ತಿಳಿದ ಬಳಿಕ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಮಂಜುನಾಥ್, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಾಮರಾಜನಗರ