

ಕೊಳ್ಳೇಗಾಲ: ಪಟ್ಟಣದ ಹೊರವಲಯ ಸೇರಿದಂತೆ ತಾಲೂಕಿನ ವಿವಿಧೆಡೆ ಎರಡು ವಾರಗಳಿಂದ ಆಗಾಗ್ಗೆ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಬೋನಿಗೆ ಬೀಳದಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಸೋಮವಾರ ಸಹ ಮುಂಜಾನೆ 5 ಗಂಟೆ ಸಮಯದಲ್ಲಿ ಪಟ್ಟಣದ ಶಿವಕುಮಾರ ಸ್ವಾಮಿ ಬಡಾವಣೆ ಬಸವರಾಜು ಎಂಬುವರ ಮನೆ ಎದುರು ಚಿರತೆ ಕಾಣಿಸಿಕೊಂಡಿದೆ ಎಂದು ರೈತ ಸಂಘದ ಶೈಲೇಂದ್ರ ತಿಳಿಸಿದ್ದಾರೆ. ಮನೆ ಬಳಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಫೋಟೋಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಹರಿಬಿಡಲಾಗಿದೆ.
ಈ ಬಗ್ಗೆ ಆರ್‌ಎಫ್‌ಒ ಭರತ್ ಹೆಜ್ಜೆ ಗುರುತು ಪರಿಶೀಲನೆ ನಡೆಸಿ, ಅದು ಚಿರತೆ ಹೆಜ್ಜೆ ಗುರುತಲ್ಲ, ನರಿಯದ್ದು ಅನಿಸುತ್ತಿದೆ. ಈ ಭಾಗದಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿ ಹೆಜ್ಜೆ ಗುರುತು ಯಾವ ಪ್ರಾಣಿಯದ್ದು ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ತಾಲೂಕಿನ ಟಗರಪುರ, ಮುಳ್ಳೂರು, ನರಸೀಪುರ ಕೆಂಪನಪಾಳ್ಯ ಹೀಗೆ ಹಲವು ಕಡೆ ಚಿರತೆಗಳು ಕಾಣಿಸಿಕೊಳ್ಳುತ್ತಿವೆ. ಕಬ್ಬು ಹಾಗೂ ಭತ್ತದ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ರೈತರು ಜಮೀನುಗಳ ಕಡೆಗೆ ಹೋಗಲು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಕಾಣಿಸಿಕೊಳ್ಳುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರೂ ಸೆರೆ ಹಿಡಿಯುವ ಕಾರ್ಯಾಚರಣೆ ಸಫಲವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.