

ಕೊಳ್ಳೇಗಾಲ:
ಕೊಳ್ಳೇಗಾಲ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್ ಅಭ್ಯರ್ಥಿ ರೇಖಾ ರಮೇಶ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿದ್ದ ಗಂಗಮ್ಮ ವರದರಾಜು ಅವರ ಸದಸ್ಯತ್ವ ಅನರ್ಹಗೊಂಡಿದ್ದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೇಖಾ ರಮೇಶ್ 14 ಮತ ಪಡೆದು ಜಯ ಗಳಿಸಿದರೆ, ಪ್ರತಿಸ್ಪರ್ಧಿ 15ನೇ ವಾರ್ಡ್ ಸದಸ್ಯೆ ಬಿಜೆಪಿ ಅಭ್ಯರ್ಥಿ ಸಿರಿಶಾ ಸತೀಶ್ 6 ಮತ ಪಡೆದು ಪರಾಭವಗೊಂಡರು.
ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಗೀತಾ ಹುಡೇದ ಕರ್ತವ್ಯ ನಿರ್ವಹಿಸಿದರು. ಪಟ್ಟಣದ ಪಿಎಸ್‌ಐ ಚೇತನ್ ನೇತೃತ್ವದಲ್ಲಿ ಚುನಾವಣೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ನಗರಸಭೆ ಪೌರಾಯುಕ್ತ ನಂಜುಂಡಸ್ವಾಮಿ ಉಪಸ್ಥಿತರಿದ್ದರು.
ಪತಿಯ ಪ್ರಾಬಲ್ಯ ಪತ್ನಿಗೆ ಅಧಿಕಾರ: ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಅಧ್ಯಕ್ಷರಾಗಿ, ಸದಸ್ಯರಾಗಿ ಸಾಕಷ್ಟು ಹೆಸರು ಪಡೆದಿರುವ ರಮೇಶ್ ಪ್ರಾಬಲ್ಯದಿಂದ ರೇಖಾ ರಮೇಶ್‌ಗೆ ಅಧಿಕಾರ ಸಿಕ್ಕಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇವರಿಗೆ ಮನ್ನಣೆ ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ 11, ಪಕ್ಷೇತರ 3, ಬಿಜೆಪಿ 6, ಬಿಎಸ್ಪಿಯ ಒಬ್ಬರು ಸೇರಿ ಒಟ್ಟು 21 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಬಿಎಸ್ಪಿ ಸದಸ್ಯೆ ಜಯಮೇರಿ ಮತ ಚಲಾವಣೆ ಮಾಡದೆ ತಟಸ್ಥವಾದರು. ಚುನಾವಣೆಗೆ ಸದಸ್ಯರಾದ ಮನೋಹರ್ (ಪಕ್ಷೇತರ), ಜಯರಾಜ್ (ಬಿಎಸ್ಪಿ), ಕವಿತಾ (ಬಿಜೆಪಿ) ಗೈರಾಗಿದ್ದರು.
ಪಟಾಕಿ ಸಿಡಿಸಿ ಸಂಭ್ರಮ: ರೇಖಾ ರಮೇಶ್ ನಗರಸಭೆಯಿಂದ ಹೊರ ಬರುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. 3ನೇ ವಾರ್ಡ್ ನಿವಾಸಿಗಳು ಸೇರಿದಂತೆ ಪಟ್ಟಣದ ನಿವಾಸಿಗಳು ಹಾರ, ಶಾಲು ಹೊದಿಸಿ ಅಭಿನಂದಿಸಿದರು.
ಚುನಾವಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸುಮಾ ಸುಬ್ಬಣ್ಣ, ನಗರಸಭೆ ಅಧ್ಯಕ್ಷೆಯ ಸ್ಥಾನ ಕೊಡುತ್ತೇವೆ ಎಂಬ ಭರವಸೆಯನ್ನು ಕಾಂಗ್ರೆಸ್ ನಾಯಕರು ನನಗೆ ನೀಡಿದ್ದರು. ಸಾಮಾನ್ಯ ಮಹಿಳೆಗೆ (ಜನರಲ್) ಅಧ್ಯಕ್ಷರಾಗುವ ಅವಕಾಶವಿದ್ದರಿಂದ ನಾನು ಆಕಾಂಕ್ಷಿಯಾಗಿದ್ದೆ. ಚುನಾವಣೆ ಹತ್ತಿರ ಬಂದಾಗ ಮಾಜಿ ಶಾಸಕ ಜಯಣ್ಣ ಸೇರಿದಂತೆ ಇನ್ನು ಕೆಲವು ಕಾಂಗ್ರೆಸ್ ಮುಖಂಡರು ರೇಖಾ ರಮೇಶ್ ಅವರನ್ನು ಆಯ್ಕೆಮಾಡಿದ್ದಾರೆ. ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿದ್ದರೂ ಲಿಂಗಾಯತ ಸಮುದಾಯಕ್ಕೆ ಮೋಸವಾಗಿದೆ. ವಾಟಾಳ್ ಮಠದ ಸ್ವಾಮೀಜಿ ಕೂಡ ನನಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರ ನೀಡುತ್ತೇನೆ ಎಂದು ಬಿಕ್ಕಿ ಬಿಕ್ಕಿ ಅಳುತ್ತ ತಮಗಾದ ನೋವನ್ನು ತೋಡಿಕೊಂಡರು.