

ಕೊಳ್ಳೇಗಾಲ : ಕನ್ನಡ ಕಲಿಕೆಗೆ ಮಕ್ಕಳು ಹೆಚ್ಚಿನ ಒತ್ತು ನೀಡಬೇಕು ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಹದೇವ ಹೇಳಿದರು. ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿರುವ ಟೀಚರ್ಸ್ ಲರ್ನಿಂಗ್ ಸೆಂಟರ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಆಲೂರು ವೆಂಕಟರಾಯರ ಸ್ಮರಣಾಕಾರ್ಯಕ್ರಮದಡಿ ತಾಲೂಕು ಮಟ್ಟದ ಕನ್ನಡ ಭಾಷಾ ಪರೀಕ್ಷೆ-2024 ಉದ್ದೇಶಿಸಿ ಮಾತನಾಡಿದರು.
ಮಕ್ಕಳು ಕನ್ನಡ ಭಾಷಾ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಮಾತೃ ಭಾಷೆ ಕಲಿಕೆಗೆ ಆದ್ಯತೆ ನೀಡಿದಷ್ಟೂ ಜ್ಞಾನ ವಿಸ್ತಾರವಾಗುತ್ತದೆ. ಕನ್ನಡ ಭಾಷೆಯ ಪದಗಳಲ್ಲಿ ಪಕ್ವತೆ ಅಡಗಿರುವುದನ್ನು ತಿಳಿಯಲು ಈ ಪರೀಕ್ಷೆ ಮಹತ್ವದ್ದಾಗಿದೆ ಎಂದರು. ಕನ್ನಡದ ಕುಲ ಪುರೋಹಿತರೆಂದೇ ಖ್ಯಾತರಾಗಿದ್ದ ಆಲೂರು ವೆಂಕಟರಾಯರ ಸ್ಮರಣೆ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಕನ್ನಡ ಭಾಷಾ ಪರೀಕ್ಷೆ ಆಯೋಜಿಸಲಾಗಿದೆ. ಈ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿ ಗಳು ಜಿಲ್ಲಾ ಮಟ್ಟದ ಪರೀಕ್ಷೆ ಆಯ್ಕೆಯಾಗಲಿದ್ದಾರೆ ಎಂದು ತಿಳಿಸಿದರು.
35 ವಿದ್ಯಾರ್ಥಿಗಳು ಭಾಗಿ: ಪರೀಕ್ಷೆಯಲ್ಲಿ ತಾಲೂಕಿನ ವಿವಿಧ ಸರ್ಕಾರಿ ಶಾಲೆಯ 35 ವಿದ್ಯಾರ್ಥಿಗಳು ಪಾ ಲ್ಗೊಂಡು ಪರೀಕ್ಷೆ ಬರೆದರು. ಬಿಆರ್‌ಪಿ ಮಾಣಿಕ್ಯ, ಸೂರಪುರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಲೋಕೇಶ್ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು ಭಾಗಿಯಾಗಿದ್ದರು.
13 ಕೆಜಿಎಲ್-1
ಕೊಳ್ಳೇಗಾಲದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿರುವ ಟೀಚರ್ಸ್ ಲರ್ನಿಂಗ್ ಸೆಂಟರ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಆಲೂರು ವೆಂಕಟರಾಯರ ಸ್ಮರಣಾ ಕಾರ್ಯಕ್ರಮದಡಿ ತಾಲೂಕು ಮಟ್ಟದ ಕನ್ನಡ ಭಾಷಾ ಪರೀಕ್ಷೆ-2024 ಕಾರ್ಯಕ್ರಮದಲ್ಲಿ ಬಿಆರ್‌ಸಿ ಮಹದೇವ ಮಾತನಾಡಿದರು.