ಕೊಳ್ಳೇಗಾಲ 2ನೇ ವಾರ್ಡ್‌ನಲ್ಲಿ ರಾಜಕೀಯ ರಂಗು

05raju10
Published on

ನಗರಸಭೆ ಉಪ ಚುನಾವಣೆ

ಕೊಳ್ಳೇಗಾಲ: ನಗರಸಭೆಯಲ್ಲಿ ತೆರವಾಗಿರುವ 7 ಸದಸ್ಯ ಸ್ಥಾನಗಳಿಗೆ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಗೊಳಿಸಿರುವ ಬೆನ್ನಲ್ಲೇ 2ನೇ ವಾರ್ಡ್‌ನದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.


ಬಿಎಸ್ಪಿ ವಿಪ್ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಸದಸ್ಯೆ ನಾಗಮಣಿ ಅನರ್ಹಗೊಂಡಿದ್ದು, ಇವರ ಸ್ಥಾನಕ್ಕೆ ಅ.28 ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಅ.17 ಕಡೆಯ ದಿನವಾಗಿದೆ.


ಈ ವಾರ್ಡ್ ಪರಿಶಿಷ್ಟ ಜಾತಿ (ಮಹಿಳೆ) ಅಭ್ಯರ್ಥಿಗೆ ಮೀಸಲಾಗಿದ್ದು. ಈ ವಾರ್ಡ್‌ನಿಂದ ಶಾಸಕ ಎನ್.ಮಹೇಶ್ ಬೆಂಬಲದಿಂದ 2018ರಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ಗೆದ್ದಿದ್ದ ನಾಗಮಣಿ 2020 ಅ.29 ರಂದು ನಡೆದ ನಗರ

ಸಭೆ ಅಧಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಎಸ್ಪಿ ಪಕ್ಷದ ವಿಪ್ ಉಲಂಘನೆ ಮಾಡಿ ಬಿಜೆಪಿ ಜತೆ ಸೇರಿದ್ದರಿಂದ ಸದಸ್ಯತ್ವ ಕಳೆದುಕೊಂಡರು.
2018ರ ನಗರಸಭೆ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿ ನಾಗಮಣಿ 318 ಮತ ಪಡೆದು ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಭಾಗ್ಯ 300 ಮತ ಪಡೆದು ಸೋತಿದ್ದರು.


ಆಕಾಂಕ್ಷಿಗಳ ದಂಡು: ಈ ಉಪ ಚುನಾವಣೆಯಲ್ಲಿ 2ನೇ ವಾರ್ಡ್‌ನಿಂದ ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಪಕ್ಷಗಳಿಂದ ಆಕಾಂಕ್ಷಿಗಳನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ. ಕಾಂಗ್ರೆಸ್‌ನಿಂದ ಭಾಗ್ಯ, ಬಿಎಸ್ಪಿ ಪಕ್ಷದಿಂದ ಎಂ.ಎನ್ ಶೋಭಾ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಅನರ್ಹಗೊಂಡಿರುವ ಸದಸ್ಯೆ ನಾಗಮಣಿ ತನ್ನ ರಾಜಕೀಯ ಗುರು ಶಾಸಕ ಎನ್.ಮಹೇಶ್ ಪ್ರಸ್ತುತ ಬಿಜೆಪಿ ಪಕ್ಷದಲ್ಲಿರುವುದರಿಂದ ಈ ಪಕ್ಷದಿಂದಲೇ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಇನ್ನು ತೆರೆಮರೆಯಲಿ ರಾಜಕೀಯ ನಾಯಕರನ್ನು ಕೆಲವರು ಭೇಟಿ ಮಾಡಿ ಟಿಕೆಟ್‌ಗಾಗಿ ಬೇಡಿಕೆ ಇಡುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಗಳೂ ಚುನಾವಣೆಗೆ ನಿಲ್ಲುವ ಸಾಧ್ಯತೆಗಳಿವೆ.


ಬಿಎಸ್ಪಿ ಕ್ಷೇತ್ರ: 2ನೇ ವಾರ್ಡ್‌ನಲ್ಲಿ ಬಿಎಸ್ಪಿ ಬೆಂಬಲಿತ ಮತದಾರರು ಇರುವುದರಿಂದ ಲೋಕಸಭೆ, ವಿಧಾನಸಭೆ, ನಗರಸಭೆ ಚುನಾವಣೆಯಲ್ಲಿ ಬಿಎಸ್ಪಿ ತನ್ನದೇ ಆದ ಮತಗಳನ್ನು ಪಡೆದಿತ್ತು. 2018ರ ಚುನಾವಣೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆನೆ ಗುರುತಿನಿಂದ(ಬಿಎಸ್ಪಿ) ಶಾಸಕ ಎನ್.ಮಹೇಶ್ ಅಮೋಘ ಗೆಲುವು ಸಾಧಿಸಿದ್ದರು. ಇದರ ಬೆನ್ನಲ್ಲೇ ನಡೆದ ನಗರಸಭೆ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿ ನಾಗಮಣಿ ಗೆಲುವು ಸಾಧಿಸಿದ್ದರು.


ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಎನ್.ಮಹೇಶ್ ಬಿಜೆಪಿ ಪಕ್ಷ ಸೇರಿದ್ದ ನಂತರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ನಾಗಮಣಿ ಎನ್.ಮಹೇಶ್ ಬಣದಲ್ಲಿ ಗುರುತಿಸಿಕೊಂಡಿದ್ದರಿಂದ ವಿಪ್ ಉಲ್ಲಂಘನೆ ಪ್ರಕರಣಕ್ಕೆ ಸಿಲುಕಿ ಅಧಿಕಾರ ಕಳೆದುಕೊಂಡಿದ್ದಾರೆ. ಆದರೆ ಬಿಎಸ್ಪಿ ಪರವಾಗಿ ಮತ ಚಲಾಯಿಸುವ ಹೆಚ್ಚು ಮತದಾರರು ಈ ವಾರ್ಡ್‌ನಲ್ಲಿದ್ದಾರೆ ಎಂಬ ಹೇಳಲಾಗುತ್ತಿದ್ದು, ಈ ಬಾರಿಯ ಉಪ ಚುನಾವಣೆಯಲ್ಲೂ ಬಿಎಸ್ಪಿ ಅಭ್ಯರ್ಥಿಗೆ ವರದಾನವಾಗಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ವಿಪ್ ಉಲ್ಲಂಘನೆಯೇ ಕಾರಣ: ಜಿಲ್ಲೆಯ ಬೇರೆ ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ವಿಭಿನ್ನ ಮತ್ತು ವಿಶಿಷ್ಟ ರಾಜಕಾರಣಕ್ಕೆ ಹೆಸರಾಗಿರುವ ಕೊಳ್ಳೇಗಾಲದಲ್ಲೀಗ ಉಪ ಚುನಾವಣೆಯದ್ದೇ ಸದ್ದು.


ಕ್ಷೇತ್ರದ ಶಾಸಕ ಎನ್.ಮಹೇಶ್ ಬಿಎಸ್ಪಿಯಿಂದ ಉಚ್ಚಾಟನೆಗೊಂಡಿದ್ದ ಕಾರಣ ಅವರ 7 ಬೆಂಬಲಿಗ ಸದಸ್ಯರು ನಗರಸಭೆ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಕ್ಷ ಬೆಂಬಲಿಸದೆ ವಿಪ್ ಉಲ್ಲಂಘನೆ ಮಾಡಿದ್ದರು. ಬಿಎಸ್ಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಯಮೇರಿ ವಿಪ್ ಉಲ್ಲಂಘನೆ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹಿಂದಿನ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿಯೂ ಆಗಿದ್ದ ಡಾ.ಎಂ.ಆರ್.ರವಿ ವಿಚಾರಣೆ ನಡೆಸಿ ವಿಪ್ ಉಲ್ಲಂಘನೆ ಮಾಡಿದ್ದ 7 ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿದ್ದರು.


2

ಚುನಾವಣೆ ಬಂದಾಗ ಮಾತ್ರ ರಾಜಕಾರಣಗಳು ಅಭಿವೃದ್ಧಿಯ ಮಾತುಗಳನ್ನಾಡುತ್ತಾರೆ. ಈ ಬಾರಿ ಉಪ ಚುನಾವಣೆಯಲ್ಲಿ ಎಲ್ಲ ಪಕ್ಷಗಳೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಲ್ಲಿ ಅನುಮಾನವಿಲ್ಲ. ರಾಜಕೀಯ, ಜಾತಿ, ಹಣದ ಆಮಿಷಕ್ಕೊಳಗಾಗದೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವುದೇ ನನ್ನ ಗುರಿ. ಈ ಮೂಲಕ ಕ್ಷೇತ್ರ ಅಭಿವೃದ್ಧಿಯಾಗಲಿದೆ ಎನ್ನುವುದು ನನ್ನ ನಂಬಿಕೆ.
ಹೆಸರು ಹೇಳಲಿಚ್ಛಿಸದ ಮತದಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net