

ಸಾಗರ: ಹೊಸನಗರ, ಸಾಗರ, ಸೊರಬ ಭಾಗದಲ್ಲಿ ಅಡಕೆಗೆ ಕೊಳೆರೋಗ ಬಂದು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೆಕ್ಟೇರ್‌ಗೆ ಕನಿಷ್ಠ 1 ಲಕ್ಷ ರೂ. ಬೆಳೆನಷ್ಟ ಪರಿಹಾರ ನೀಡಬೇಕು ಎಂದು ಪ್ರಾಂತೀಯ ಬ್ರಾಹ್ಮಣ ವೀರಶೈವ ಒಕ್ಕೂಟ ರಾಜ್ಯ ಸರ್ಕಾರವನ್ನು ಆಗ್ರಹಪಡಿಸಿದೆ.
ಮಂಗಳವಾರ ಒಕ್ಕೂಟದಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಸಂಚಾಲಕ ಕೆ.ಎನ್.ಶ್ರೀಧರ್ , ವಾಡಿಕೆಗಿಂತ ಹೆಚ್ಚಿನ ಮಳೆ ಬಿದ್ದ ಪರಿಣಾಮ ಶೇ.80ರಷ್ಟು ಅಡಕೆ ಕೊಳೆರೋಗಕ್ಕೆ ತುತ್ತಾಗಿ ನಾಶವಾಗಿದೆ. ಅಧಿಕಾರಿಗಳು ಈತನಕ ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ. ಮೀನಮೇಷ ಮಾಡುತ್ತಿದ್ದಾರೆ. ಹಾಲಿ ಹೆಕ್ಟೇರ್‌ಗೆ ನೀಡುತ್ತಿರುವ 28 ಸಾವಿರ ರೂ. ಪರಿಹಾರ ತೀರ ಕಡಿಮೆ ಆಗಿದ್ದು, 1 ಲಕ್ಷ ರೂ. ಪರಿಹಾರ ನೀಡಬೇಕು. ಅಧಿಕಾರಿಗಳು ಕೊಳೆಯಿಂದ ಹಾನಿಗೊಳಗಾದ ಎಲ್ಲ ಅಡಿಕೆ ತೋಟಗಳಿಗೂ ಭೇಟಿ ನೀಡಬೇಕು ಕೂಡಲೇ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೆಳೆಗಾರರ ಪರವಾಗಿ ನಿಲ್ಲುವ ಸಂಘಟನೆಯೆಂದರೆ ಬ್ರಾಹ್ಮಣ ವೀರಶೈವ ಒಕ್ಕೂಟ ಮಾತ್ರ. ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ ಐದು ವರ್ಷದಿಂದ ನಿಷ್ಕ್ರಿಯವಾಗಿದ್ದು, ಅದನ್ನು ವಜಾಗೊಳಿಸಲಾಗಿದೆ ಎನ್ನುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಒಕ್ಕೂಟವು ಅಡಕೆ ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ತನ್ನ ಪ್ರಯತ್ನದಿಂದ ಹಿಂದೆ ಸರಿಯುವುದಿಲ್ಲ. ತಕ್ಷಣ ಅಧಿಕಾರಿಗಳು ಕೊಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಬೇಕು. ಸಾಂಪ್ರದಾಯಿಕ ಅಡಕೆ ಬೆಳೆಗಾರರು ಹೆಚ್ಚು ನಷ್ಟಕ್ಕೆ ಒಳಗಾಗಿದ್ದು, ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಕೆ.ವಿ.ಪ್ರವೀಣ್ ಮನವಿ ಮಾಡಿದರು.