ಕೊಳವೆಬಾವಿಯಿಂದ ಶವ ತೆಗೆದ ಪೊಲೀಸರು

KDR crime
ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ಜಮೀನಿನ ಕೊಳವೆಬಾವಿ ಗುಂಡಿಯಲ್ಲಿ ಹೂತಿಟ್ಟದ್ದ ಭಾರತಿ ಶವವನ್ನು ಜೆಸಿಬಿಯಿಂದ ಹೊರತೆಗೆಯಲಾಯಿತು. ಗ್ರಾಮಸ್ಥರು ಇದ್ದರು.
Published on

ಕಡೂರು: ಆಲಘಟ್ಟ ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳ ನೀಡಿ ಪತಿಯೇ ಪತ್ನಿಯನ್ನು ಸಾಯಿಸಿ ಜಮೀನಿನಲ್ಲಿ ಕೊಳವೆಬಾವಿ ಗುಂಡಿಗೆ ಶವ ಹಾಕಿ ಮುಚ್ಚಿದ್ದನ್ನು ಪೊಲೀಸರು ಭಾನುವಾರ ತಹಸೀಲ್ದಾರ್ ಸಮ್ಮುಖದಲ್ಲಿ ಜೆಸಿಬಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರಕ್ಕೆ ಮೃತಳ ಪಾಲಕರಿಗೆ ಹಸ್ತಾಂತರಿಸಿದರು.

ವರದಕ್ಷಿಣೆ ವಿಚಾರವಾಗಿ ಆಲಘಟ್ಟ ಗ್ರಾಮದ ವಿಜಯ್‌ಕುಮಾರ್ ಎಂಬುವನು ಪತ್ನಿ ಭಾರತಿ(26)ಯನ್ನು ಸೆ.3ರ ರಾತ್ರಿ ಕೊಲೆ ಮಾಡಿ ತಂದೆಯ ಸಹಾಯದಿಂದ ಶವವನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಜಮೀನಿನ ಕೊಳವೆಬಾವಿಯ ಸುಮಾರು 12 ಅಡಿ ಆಳದ ಗುಂಡಿಗೆ ಇಳಿಬಿಟ್ಟು ಬಳಿಕ ಎಂಸ್ಯಾಂಡ್ ಮತ್ತು ಗೋಣಿಚೀಲ ಹಾಕಿ ಮುಚ್ಚಿದ್ದ. ಬಳಿಕ ಪತ್ನಿ ಕಾಣೆಯಾಗಿದ್ದಾಳೆ ಎಂದು ಸುಳ್ಳು ಹೇಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ.

ಮೃತ ಭಾರತಿಯ ತಾಯಿಯು ಅಳಿಯ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪದಡಿ ದೂರು ನೀಡಿದ್ದರು. ಆದ್ದರಿಂದ ಪತಿ ವಿಜಯಕುಮಾರ್, ಮಾವ ಗೋವಿಂದಪ್ಪ ಹಾಗೂ ಅತ್ತೆ ತಾಯಮ್ಮ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದರು. ಅ.14ರಂದು ಪೊಲೀಸರು ಸ್ಥಳ ಮಹಜರು ನಡೆಸಿದ್ದರು.

ಪೊಲೀಸರು ಕಾನೂನಾತ್ಮಕ ಅನುಮತಿ ಪಡೆದು ಭಾನುವಾರ ಕೊಳವೆಬಾವಿ ಗುಂಡಿಯನ್ನು ಜೆಸಿಬಿಯಿಂದ ಬಗೆದು ಶವ ಹೊರ ತೆಗೆದರು. ಅರೆಬರೆ ಕೊಳೆತ ಸ್ಥಿತಿಯಲ್ಲಿದ್ದ ಶವದ ಸ್ಯಾಂಪಲ್‌ಗಳನ್ನು ಎಫ್‌ಎಸ್‌ಎಲ್ ತಂಡದ ತಜ್ಞರು ಪಡೆದರು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೂವರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.

ಶವವನ್ನು ಹೊರತೆಗೆಯುತ್ತಿದ್ದಂತೆ ಪರದೇಶಿಹಾಳ್ ಗ್ರಾಮದ ಮೃತಳ ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನದ ಮುಗಿಲುಮುಟ್ಟಿತು. ಭಾರತಿಯ ತಾಯಿಯ ಬಳಿ ಇದ್ದ ಎರಡು ವರ್ಷದ ಹೆಣ್ಣು ಮಗುವಿನ ಅನಾಥಭಾವ ಕಂಡು ನೆರೆದಿದ್ದವರ ಹೃದಯ ಕಲಕುವಂತಿತ್ತು. ಸುತ್ತಮುತ್ತಲ ಗ್ರಾಮಸ್ಥರು ಜಮೀನಿನಲ್ಲಿ ಜಮಾಯಿಸಿದ್ದರು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಡಿವೈಎಸ್ಪಿ ಪರಮೇಶ್ವರಪ್ಪ, ಸಿಪಿಐ ರಫೀಕ್, ಪಿಎಸ್‌ಐಗಳಾದ ಸಚೇತ್‌ಕುಮಾರ್, ಧನಂಜಯ್, ಕಂದಾಯ ನಿರೀಕ್ಷಕ ರವಿಕುಮಾರ್, ಪೊಲೀಸ್, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net