

ಸುಗ್ಗರಾಜು ಜಿ.ಕೆ. ನೆಲಮಂಗಲ
ಬೇಸಿಗೆಯಿಂದಾಗಿ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಕೆಲ ಕೊಳವೆಬಾವಿಗಳು ಬತ್ತುತ್ತಿರುವ ಜತೆಗೆ ಹಲವು ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಮಾರ್ಚ್‌ನಲ್ಲಿ ಬರಬೇಕಿದ್ದ ವಾಡಿಕೆ ಮಳೆ ಬಾರದ ಪರಿಣಾಮ ಕೆರೆ-ಕುಂಟೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಇದರಿಂದಾಗಿ ಮೇನಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸಲಿದ್ದು, ಜನಜಾನುವಾರು ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತವಾಗಿದೆ.
ಮಾರ್ಚ್‌ನಲ್ಲಿ ತಾಲೂಕಿನ ಒಟ್ಟು 21 ಗ್ರಾಪಂಗಳ ಪೈಕಿ ಸೋಲದೇವನಹಳ್ಳಿ, ಅಗಲಕುಪ್ಪೆ, ಕೋಡಿಗೇಹಳ್ಳಿ, ಶ್ರೀನಿವಾಸಪುರ, ಕುಲುವನಹಳ್ಳಿ ಸೇರಿ 7 ಗ್ರಾಪಂಗಳ 9 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿತ್ತು. ಏಪ್ರಿಲ್ ಆರಂಭದಲ್ಲೇ ಈ ಪಟ್ಟಿಗೆ ಇನ್ನಷ್ಟು ಗ್ರಾಮಗಳು ಸೇರ್ಪಡೆಗೊಂಡಿವೆ.
ಎಲ್ಲೆಲ್ಲಿ ನೀರಿನ ಸಮಸ್ಯೆ: ತಾಲೂಕಿನ 21 ಗ್ರಾಪಂಗಳ ಪೈಕಿ ಆಗಲಕುಪ್ಪೆ ಗ್ರಾಪಂನ ಕಮಲಾಪುರ ಗ್ರಾಮ, ಮರಳುಕುಂಟೆ ಗ್ರಾಪಂನ ಹುಲ್ಲಹರಿವೆ, ದೊಡ್ಡಬೆಲೆ ಗ್ರಾಪಂನ ಕಾರೇಹಳ್ಳಿ, ಕುಲವನಹಳ್ಳಿ ಗ್ರಾಪಂನ ಆಲಹಳ್ಳಿ, ಕೊಡಿಗೇಹಳ್ಳಿ ಗ್ರಾಪಂನ ಕೊಡಿಗೇಹಳ್ಳಿ, ಅತುಕುಂಟೆಪಾಳ್ಯ, ಧರ್ಮಜಯನಪಾಳ್ಯ, ಶ್ರೀನಿವಾಸಪುರ ಗ್ರಾಪಂನ ಹನುಮಂತೇಗೌಡನಪಾಳ್ಯ, ಸೋಲದೇವನಹಳ್ಳಿ ಗ್ರಾಪಂನ ಕಾಸಿನಕಲ್ಲು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವುದಾಗಿ ಗ್ರಾಮೀಣ ಕುಡಿಯುವ ನೀರು, ನೈರ್ಮಲೀಕರಣ ಇಲಾಖೆ ಪಟ್ಟಿ ಮಾಡಿದೆ.
ಟ್ಯಾಂಕರ್‌ನಲ್ಲಿ ನೀರು ಪೂರೈಕೆ: ನೀರಿನ ಸಮಸ್ಯೆ ತೀವ್ರವಾಗಿರುವ ಗ್ರಾಮಗಳಲ್ಲಿ ತಾತ್ಕಾಲಿಕವಾಗಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಬೇಕಿದೆ. ಜತೆಗೆ ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮುಂದಾಗಬೇಕಿದೆ. ಪಿಡಿಒಗಳು ನೀಡಿರುವ ಮಾಹಿತಿ ಪ್ರಕಾರ, ವಿವಿಧ ಗ್ರಾಪಂಗಳ ವ್ಯಾಪ್ತಿಯಲ್ಲಿ 57 ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಸಮಸ್ಯೆಯಿರುವ ಕೆಲ ಗ್ರಾಮಗಳಲ್ಲಿ ಕೊಳವೆಬಾವಿಗಳಿಗೆ ಪಂಪ್ ಮೋಟಾರ್ ಅಳವಡಿಸಿಲ್ಲ. ಇನ್ನೊಂದೆಡೆ ವಿದ್ಯುತ್ ಸಂಪರ್ಕ ದೊರೆಯದ ಕಾರಣದಿಂದ ಆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ತೀವ್ರವಾಗುತ್ತಿದೆ ಎನ್ನಲಾಗಿದೆ.
ಜನಪ್ರತಿನಿಧಿಗಳೇ ಇಲ್ಲ: ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಜನಪ್ರತಿನಿಧಿಗಳ ಅಧಿಕಾರಾವಧಿ ಮುಗಿದಿದೆ. ನಾನಾ ಕಾರಣಗಳಿಂದ ಚುನಾವಣೆಗಳು ವಿಳಂಬವಾಗಿವೆ. ಇದು ಕೂಡ ನೀರಿನ ಸಮಸ್ಯೆ ಪರಿಹಾರ ಆಗದಿರಲು ಕಾರಣ.
ಭೂವಿಜ್ಞಾನಿಗಳ ನಡೆ ಬಗ್ಗೆ ಸಂಶಯ: ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆಂದು ಭೂವಿಜ್ಞಾನಿಗಳು ನಿಗದಿಪಡಿಸಿದ ಸ್ಥಳಗಳಲ್ಲಿ ಕೊರೆದಿರುವ ಕೊಳವೆಬಾವಿಗಳ ಪೈಕಿ ಹಲವು ಕೊಳವೆಬಾವಿಗಳು ಬತ್ತಿ ಹೋಗಿವೆ. ಹೆಚ್ಚಿನ ಸಂಖ್ಯೆಯ ಕೊಳವೆಬಾವಿಗಳು ವಿಲವಾಗಿ, ಲಕ್ಷಾಂತರ ರೂಪಾಯಿ ಹಣ ಅಪವ್ಯಯವಾದಂತಾಗಿದೆ. ತೆಂಗಿನಕಾಯಿ ಅಥವಾ ಹಸಿಕಡ್ಡಿ ಬಳಸಿ ಹಳೆಯ ಮಾದರಿಯಲ್ಲೇ ಕೆಲವು ತಜ್ಞರು ನಿಗದಿಪಡಿಸಿದ ಸ್ಥಳಗಳಲ್ಲಿ ಹೇರಳವಾಗಿ ನೀರು ದೊರೆತಿದೆ. ಆದ್ದರಿಂದ, ಭೂವಿಜ್ಞಾನಿಗಳ ನಡೆ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.
ಅನುದಾನ ಬಿಡುಗಡೆಯಾದರೆ ಸಮಸ್ಯೆ ಪರಿಹಾರ: ತಾಲೂಕಿನ 19 ಗ್ರಾಮಗಳಲ್ಲಿ ಕೊರೆದಿರುವ ಕೊಳವೆಬಾವಿಗಳಿಗೆ ಪಂಪು ಮೋಟಾರು ಅಳವಡಿಕೆಗೆ 1.38 ಕೋಟಿ ರೂ. ಅನುದಾನ ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದಾಗಿ ಹಲವು ತಿಂಗಳು ಕಳೆದರೂ ಅನುದಾನ ಬಿಡುಗಡೆಯಾಗಿಲ್ಲ. ಈ ಅನುದಾನ ಬಂದರೆ, ಸಮಸ್ಯೆ ಪರಿಹರಿಸಲು ಅನುಕೂಲವಾಗುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು, ನೈರ್ಮಲೀಕರಣ ಕಾರ್ಯನಿರ್ವಾಹಕ ಅಭಿಯಂತ ಶ್ರೀಕಾಂತ್ ಸ್ಪಷ್ಟಪಡಿಸಿದರು. ನೀರಿನ ಸಮಸ್ಯೆ ಇದ್ದ ಒಂದು ಗ್ರಾಮಕ್ಕೆ ವಾಟರ್ ಟ್ಯಾಂಕ್‌ನಿಂದ ಹಾಗೂ 8 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ನಿಂದ ನೀರಿನ ಸಂಪರ್ಕ ಕಲ್ಪಿಸಿ, ಸಮಸ್ಯೆ ಪರಿಹರಿಸಲಾಗಿದೆ ಎಂದು ಹೇಳಿದರು.
ತಾಲೂಕಿನಾದ್ಯಂತ ದಿನೇದಿನೆ ನೀರಿನ ಬವಣೆ ಹೆಚ್ಚಾಗುತ್ತಿದೆ. ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಸಲ್ಲಿಸಿರುವ 1.38 ಕೋಟಿ ರೂ. ಪ್ರಸ್ತಾವನೆಯಂತೆ ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು. ತನ್ಮೂಲಕ ಜನಜಾನುವಾರುಗಳನ್ನು ಸಂಕಷ್ಟದಿಂದ ಪಾರು ಮಾಡಬೇಕು. ಕಾಸರಘಟ್ಟ ಗಂಗಾಧರ್, ನೆಲಮಂಗಲ