

ಚಿತ್ರದುರ್ಗ: ರೈತ ಸಮುದಾಯಕ್ಕೆ ಹೊರೆಯಾಗದಂತೆ, ಕೊಳವೆಬಾವಿ ಕೊರೆಯುವ ಲಾರಿಗಳ ಮಾಲೀಕರಿಗೆ ಹಾಗೂ ಏಜೆನ್ಸಿಗಳಿಗೂ ನಷ್ಟವಾಗದಂತೆ ಬೋರ್‌ವೆಲ್ ಕೊರೆಯಲು ಏಕರೂಪ ದರ ನಿಗದಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೊಳವೆಬಾವಿ ಕೊರೆಯುವ ಲಾರಿಗಳ ಮಾಲೀಕರು, ಏಜೆನ್ಸಿಗಳು ಹಾಗೂ ರೈತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.
ಅಂತರ್ಜಲ ಕುಸಿತದಿಂದಾಗಿ ಬೋರ್‌ವೆಲ್‌ಗಳು ಬರಿದಾಗುತ್ತಿದ್ದು, ಹೊಸದಾಗಿ ಕೊರೆಯಲು ಅತ್ಯಂತ ದುಬಾರಿ ಶುಲ್ಕ ವಸೂಲಿ ಮಾಡಿ ರೈತರ ಶೋಷಣೆ ಮಾಡುತ್ತಿದ್ದಾರೆ ಎಂಬ ದೂರು ಕೇಳಿಬರುತ್ತಿದೆ. ಜಿಲ್ಲೆಯಲ್ಲಿ ಬರಗಾಲದ ತೀವ್ರತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಹೆಚ್ಚಿನ ದರ ವಿಧಿಸದೆ, ಕಾಳಜಿ ವಹಿಸಿ ಏಕರೂಪ ದರದಲ್ಲಿ ಕೊರೆಯಬೇಕು ಎಂದು ತಾಕೀತು ಮಾಡಿದರು.
ಬೋರ್‌ವೆಲ್ ಕೊರೆಸಿದರೂ ನೀರು ಬೀಳುತ್ತದೆಯೇ ಎಂಬುದು ಮುಖ್ಯ. ಇಲ್ಲದಿದ್ದರೆ, 2 ಲಕ್ಷ ರೂ. ಸಾಲ ಮಾಡಿದ ರೈತ ಮರುಪಾವತಿಸಲು 4 ವರ್ಷ ಕಷ್ಟಪಡಬೇಕಿದೆ. ಒಂದು ಫೇಲ್ ಆದರೆ, ಮತ್ತೊಂದು ಕೊರೆಸಲು ಮುಂದಾಗಿದ್ದಾರೆ. ಆದ್ದರಿಂದ ಡ್ರಿಲಿಂಗ್, ಕೇಸಿಂಗ್ ಹೀಗೆ ಪ್ರತಿಯೊಂದಕ್ಕೂ ಹೆಚ್ಚಿನ ದರ ಪಡೆಯಬೇಡಿ. ಸಾಮಾನ್ಯ ದರ ನಿಗದಿ ಮಾಡಿಕೊಂಡು ಕೊರೆಯಬೇಕು ಎಂದು ಸೂಚಿಸಿದರು.
ಅಧಿಕೃತ ರಸೀದಿ ನೀಡದೆಯೇ ಬಿಳಿ ಚೀಟಿ ವ್ಯವಹಾರ ನಡೆಸಿ, ಸರ್ಕಾರಕ್ಕೂ ವಂಚಿಸುತ್ತಿರುವ ಕುರಿತು ದೂರುಗಳಿವೆ. ಇದಕ್ಕೆ ಆಸ್ಪದ ಕೊಡದೆ, ರಸೀದಿ ಸಹಿತ ಪಾರದರ್ಶಕವಾಗಿ ವ್ಯವಹಾರ ನಡೆಸಬೇಕು. ಇಲ್ಲದಿದ್ದರೆ, ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡ ಮಾಲೀಕರಾಗಲಿ, ಖಾಸಗಿಯವರಾಗಲಿ, ಯಾರೇ ಆದರೂ ಅಂಥವರ ವಾಹನ ವಶಕ್ಕೆ ಪಡೆದು ದೂರು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಏಕರೂಪ ದರ ನಿಗದಿಗಾಗಿ ತಾಲೂಕುವಾರು ಆಯಾ ತಹಸೀಲ್ದಾರ್, ವಿವಿಧ ಇಲಾಖೆ ಅಧಿಕಾರಿಗಳು, ರೈತ ಸಂಘನೆಗಳ ಮುಖಂಡರು, ಬೋರ್‌ವೆಲ್ ಕೊರೆಯುವ ಲಾರಿಗಳ ಮಾಲೀಕರು, ಏಜೆನ್ಸಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು. ಅಲ್ಲಿ ದರ ನಿಗದಿಯಾಗದಿದ್ದರೆ, ನನ್ನ ಬಳಿ ಬರಬಹುದು ಎಂದರು.
ವಿಫಲವಾದ ಬೋರ್‌ವೆಲ್‌ಗಳನ್ನು ಸಂಬಂಧಿಸಿದ ಮಾಲೀಕರು, ಏಜೆನ್ಸಿಗಳು ತಕ್ಷಣವೇ ಮುಚ್ಚಬೇಕು. ಅದರಿಂದ ಹೊರತೆಗೆಯುವ ಕೇಸಿಂಗ್ ಪೈಪ್‌ಗೆ ಯಾವುದೇ ಕಾರಣಕ್ಕೂ ಶುಲ್ಕ ಪಡೆಯುವಂತಿಲ್ಲ. ಜಿಲ್ಲೆಯ ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಇಲ್ಲದಿದ್ದರೆ, ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡ ಈಚಘಟ್ಟ ಸಿದ್ಧವೀರಪ್ಪ ಮಾತನಾಡಿ, ಕಳೆದೊಂದು ತಿಂಗಳ ಹಿಂದೆ ಬೋರ್‌ವೆಲ್ ಕೊರೆಯಲು ಪ್ರತಿ ಅಡಿಗೆ 90 ರೂ. ಇದ್ದ ದರವೀಗ 120ರಿಂದ 130 ರೂ.ಗೆ ಏರಿಕೆಯಾಗಿದೆ. ಯಾವ ಆಧಾರದ ಮೇಲೆ ಹೆಚ್ಚಿಸಿದ್ದಾರೆ ಎಂದು ಪ್ರಶ್ನಿಸಿದರು.
ರೈತರು ಅಸಂಘಟಿತರಾದ ಕಾರಣ ಪ್ರಶ್ನಿಸಲು ಸಾಧ್ಯವಾಗುತ್ತಿಲ್ಲ. ಅಸಹಾಯಕತೆ ಬಳಸಿಕೊಂಡು ಶೋಷಿಸುತ್ತಿದ್ದಾರೆ. ಬರಗಾಲದ ಪರಿಸ್ಥಿತಿಯಲ್ಲಿ ರೈತರಿಗೆ ಮಾನವೀಯತೆ ದೃಷ್ಟಿಯಿಂದ ರಿಯಾಯಿತಿ ದರದಲ್ಲಿ ಯಾರಿಗೂ ಅನ್ಯಾಯವಾಗದಂತೆ ಕೊರೆಯಲು ಸೂಚಿಸಬೇಕು. ಸೂಕ್ತ ಅಂತರ್ಜಲ ತಜ್ಞರನ್ನು ಲಾರಿಗಳ ಮಾಲೀಕರೇ ಕರೆಸಿ ಪಾಯಿಂಟ್ ಗುರುತಿಸಬೇಕು ಎಂದು ಮನವಿ ಮಾಡಿದರು.
ಮಾಲೀಕರು, ಏಜೆನ್ಸಿಗಳ ಪ್ರತಿನಿಧಿಗಳು ಮಾತನಾಡಿ, ಕೊರೆಯಲು ಕಾರ್ಮಿಕರ ಸಮಸ್ಯೆ ತೀವ್ರವಾಗಿದೆ. ಹೀಗಾಗಿ ಶೇ 25ರಷ್ಟು ವಾಹನಗಳು ಸ್ಥಗಿತಗೊಂಡಿವೆ. ಛತ್ತಿಸ್‌ಘಡದಿಂದ ಕಾರ್ಮಿಕರನ್ನು ಕರೆದುಕೊಂಡು ಬರಲಾಗುತ್ತಿದೆ. 1.25 ಕೋಟಿ ರೂ. ಇದ್ದ ವಾಹನ, ಉಪಕರಣಗಳ ಬೆಲೆ ಈಗ 2.5 ಕೋಟಿ ರೂ.ಗೆ ಏರಿಕೆಯಾಗಿದೆ. ನಾವು ರೈತರ ಪರವಾಗಿದ್ದೇವೆ ಎಂದು ಹೇಳಿದರು.
ರೈತ ಮುಖಂಡ ಕೆ.ಪಿ.ಭೂತಯ್ಯ ಮಾತನಾಡಿ, ಬರಗಾಲ ಹಾಗೂ ಬೆಳೆ ಇಲ್ಲದೇ ರೈತರು ಕಂಗಲಾಗಿದ್ದಾರೆ. ಬೆಳೆವಿಮೆ ಪಾವತಿಗೂ ನಿರ್ದಿಷ್ಟ ದಿನಾಂಕ ನಿಗದಿಪಡಿಸಬೇಕು. ಕೃಷಿ ಮತ್ತು ಕಂದಾಯ ಇಲಾಖೆಯ ಬೆಳೆ ಸಮೀಕ್ಷೆ ವರದಿ ಆಧಾರಿಸಿ ಪರಿಹಾರ ನೀಡಬೇಕು. ಫಸಲ್ ಭಿಮಾ ಯೋಜನೆಯ ಲೋಪದೋಷ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ವರದಿ ಪರಿಣಾಮ: ಕೊಳವೆಬಾವಿ ಕೊರೆಯಲು ರೈತರಿಂದ ಹೆಚ್ಚಿಗೆ ಹಣ ಪಡೆಯುತ್ತಿರುವ ಕುರಿತು ವಿಜಯವಾಣಿ ಪತ್ರಿಕೆಯೂ ವಿಶೇಷ ವರದಿ ಪ್ರಕಟಿಸಿ ಬೆಳಕು ಚೆಲ್ಲುವ ಪ್ರಯತ್ನ ಮಾಡಿತ್ತು.
ವಾರದೊಳಗೆ ಬೆಳೆ ವಿಮೆ ಪಾವತಿ: ಬೆಳೆವಿಮೆ ಕಂಪನಿಯೊಂದಿಗೆ ಈಗಾಗಲೇ ಚರ್ಚಿಸಿದ್ದು, ವಾರದೊಳಗೆ ಜಿಲ್ಲೆಯ ರೈತರಿಗೆ ಬೆಳೆವಿಮೆ ಪಾವತಿಗೆ ಕ್ರಮವಹಿಸಲಾಗುವುದು ಎಂದು ಟಿ.ವೆಂಕಟೇಶ್ ಭರವಸೆ ನೀಡಿದರು. ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದ್ದು, ವಾರದೊಳಗೆ ಪಾವತಿಸಲು ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪಾವತಿಯಾಗದಿದ್ದರೆ, ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ಕೂಡ ನೀಡಿದ್ದೇನೆ ಎಂದು ಡಿಸಿ ತಿಳಿಸಿದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಆರ್‌ಟಿಒ ಭರತ್ ಎಂ.ಕಾಳೇಸಿಂಘೆ, ರೈತ ಮುಖಂಡರಾದ ರೆಡ್ಡಿಹಳ್ಳಿ ವೀರಣ್ಣ, ಹಂಪಯ್ಯನಮಾಳಿಗೆ ಧನಂಜಯ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ನಿಜಲಿಂಗಪ್ಪ, ಕೊಂಚೆ ಶಿವರುದ್ರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಲಕ್ಷ್ಮಿಕಾಂತ್ ಇತರರಿದ್ದರು.