ಕೊಳವೆಬಾವಿ ಏಜೆನ್ಸಿಗಳ ಶೋಷಣೆಗೆ ಖಂಡನೆ

Raithasangha
Published on

ಚಿತ್ರದುರ್ಗ: ಖಾಸಗಿ ಕೊಳವೆಬಾವಿ ಏಜೆನ್ಸಿಗಳು ಬೋರ್‌ವೆಲ್ ಕೊರೆಯಲು ಹೆಚ್ಚಿಗೆ ಹಣ ಪಡೆಯುತ್ತಿರುವುದನ್ನು ಖಂಡಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ (ಪ್ರೊ.ಎಂ.ಡಿ.ನಂಜುಂಡಸ್ವಾಮಿ ಬಣ) ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕೂಡಲೇ ಖಾಸಗಿ ಕೊಳವೆಬಾವಿ ಅಸೋಸಿಯೇಷನ್ ಸಭೆ ಕರೆದು ಸೂಕ್ತ ಬೆಲೆ ನಿಗದಿಗೆ ಕ್ರಮವಹಿಸಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ ಮಾತನಾಡಿ, ಪ್ರಸಕ್ತ ವರ್ಷ ಗಂಭೀರವಾದ ಬರಗಾಲ ಎದುರಾಗಿದ್ದು, ಅಂತರ್ಜಲ ಪಾತಳಕ್ಕೆ ಕುಸಿದಿದೆ. ದಿನೇ ದಿನೆ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಸಂಕಷ್ಟ ಕಾಲದಲ್ಲಿ ರೈತರಿಂದಲೇ ಸುಲಿಗೆ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ರೈತರು ತಮ್ಮ ತೋಟ ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಈ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು 300 ಅಡಿವರೆಗೂ ಪ್ರತಿ ಅಡಿಗೆ 120ರಿಂದ 130 ರೂ., ಆನಂತರ ಪ್ರತಿ 100 ಅಡಿಗೂ ಏರಿಕೆ ಮಾಡಿ ಶೋಷಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನೂ ಕೇಸಿಂಗ್ ಪೈಪ್‌ಗೂ ದುಬಾರಿ ಶುಲ್ಕ ನಿಗದಿಗೊಳಿಸಿ ರೈತರನ್ನು ವಂಚಿಸಲಾಗುತ್ತಿದೆ. ಕೂಡಲೇ ಖಾಸಗಿ ಕೊಳವೆಬಾವಿ ಲಾರಿ ಮಾಲೀಕರ, ರೈತರ ಸಭೆ ನಡೆಸುವ ಮೂಲಕ ಪಾರದರ್ಶಕ ಬೆಲೆ ನಿಗದಿಗೆ ಕ್ರಮವಹಿಸಬೇಕು ಎಂದು ಕೋರಿದರು.

ಸಮಿತಿ ಜಿಲ್ಲಾ ಅಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಮುಖಂಡರಾದ ಬಸವರಾಜು, ನಿಜಲಿಂಗಪ್ಪ, ಗಿರೀಶ್, ಶಂಕರಪ್ಪ, ಪರಮೇಶ್ವರಪ್ಪ, ಮಲ್ಲೇಶ್, ಶೋಭಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net