

ಹುಲಸೂರು: ಪಟ್ಟಣದ ಭೀಮ ನಗರ ಬಡಾವಣೆಯ ಕೊಳವೆ ಬಾವಿಯಿಂದ ನೊರೆ ಮಿಶ್ರಿತ ಕಲುಷಿತ ನೀರು ಬರುತ್ತಿರುವುದರಿಂದ ಜನರು ಆತಂಕಗೊಂಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕೊಳವೆ ಬಾವಿ ಪಕ್ಕದಲ್ಲಿ ಸಮುದಾಯ ಇಂಗು ಗುಂಡಿ ನಿರ್ಮಿಸಿ ಅದರಲ್ಲಿ ಚರಂಡಿ ನೀರು ಸಂಗ್ರಹ ಮಾಡುತ್ತಿದ್ದರಿಂದ ಕಲುಷಿತ ನೀರು ಬರುತ್ತಿವೆ ಎಂದು ಬಡಾವಣೆಯ ಜನರು ಆರೋಪಿಸಿದ್ದಾರೆ.
ಕಳೆದ ಒಂದು ವಾರದಿಂದ ಕಲುಷಿತ ನೀರು ಸರಬರಾಜು ಆಗುತ್ತಿದ್ದು, ಇದರಿಂದ ಜನರು ವಿವಿಧ ರೋಗ ಹರಡುವ ಆತಂಕಗೊಂಡಿದ್ದಾರೆ. ಬೇಗನೆ ಹೊಸ ಕೊಳವೆ ಬಾವಿ ಕೊರೆದು ನೀರಿನ ವ್ಯವಸ್ಥೆ ಮಾಡಬೇಕು ಎಂದು ಗ್ರಾಪಂ ಸದಸ್ಯ ವಿದ್ಯಾಸಾಗರ ಬನಸೊಡೆ ಆಗ್ರಹಿಸಿದರು.
ಅಧಿಕಾರಿಗಳ ಭೇಟಿ: ಭೀಮ ನಗರ ಬಡಾವಣೆಯ ಕೊಳವೆ ಬಾವಿಯಿಂದ ನೊರೆ ಬರುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ತಾಪಂ ಇಒ ವೈಜಣ್ಣ ಫುಲೆ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಎಇಇ ಶಿವರಾಜ ಪಲ್ಲರಿ, ಜೆಇ ರಾಮಚಂದ್ರ ಗಾದಗೆ, ಪಿಡಿಒ ರಮೇಶ ಮೇಲಿಂದಕರ ಭೇಟಿ ನೀಡಿ ಪರಿಶೀಲಿಸಿದರು.
ನೀರು ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲಿಯವರೆಗೆ ನೀರಿನ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಕೂಡಲೇ ಸಮುದಾಯ ಇಂಗು ಗುಂಡಿ ತೆರವುಗೊಳಿಸಿ ಚರಂಡಿ ನೀರು ಹಾದು ಹೋಗುವ ವ್ಯವಸ್ಥೆ ಮಾಡಬೇಕು ಎಂದು ಸ್ಥಳದಲ್ಲಿದ್ದ ಪಿಡಿಒ ಅವರಿಗೆ ಇಒ ವೈಜಣ್ಣ ಫುಲೆ ಸೂಚಿಸಿದರು.