ಕೊಳವೆ ಬಾವಿಗೆ ವಿದ್ಯುತ್ ಮೋಟಾರ್ ಪಂಪ್ ವಿತರಣೆಗೆ ಅಧಿಕಾರಿಗಳ ನಿರ್ಲಕ್ಷ

ಕೊಳವೆ ಬಾವಿಗೆ ವಿದ್ಯುತ್ ಮೋಟಾರ್ ಪಂಪ್ ವಿತರಣೆಗೆ ಅಧಿಕಾರಿಗಳ ನಿರ್ಲಕ್ಷ
Published on

ಹಾಸನ: ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 25 ರೈತ ಫಲಾನುಭವಿಗಳಿಗೆ ಕಳದ 20 ತಿಂಗಳ ಹಿಂದೆ ಕೊಳವೆ ಬಾವಿ ಕೊರೆದಿದ್ದು, ಈ ವರೆಗೂ ವಿದ್ಯುತ್ ಮೋಟಾರ್ ಪಂಪ್, ಫೈಪ್‌ವಿತರಣೆಯಾಗಿಲ್ಲ ಇದರ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದರು ಕೂಡ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ರೈತರು ಆಕೋಶ ವ್ಯಕ್ತಪಡಿಸಿದರು.
ಬೇಲೂರು ವಿಧಾನ ಸಭಾ ಕ್ಷೇತ್ರಕ್ಕೆ ಸೇರುವ ಅರಸೀಕೆರೆ ತಾಲೂಕು ಜಾವಗಲ್ ಹೋಬಳಿಯ ಸುಮಾರು 25 ರೈತ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆಯಿಂದ 2022ರಲ್ಲೇ ಕೊಳವೆಬಾವಿ ಕೊರೆಯಲಾಗಿದೆ. ಆದರೆ ಇದುವರೆಗೂ ಯಾವುದೇ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ, ವಿದ್ಯುತ್ ಮೋಟಾರ್ ನೀಡಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಾಳೇನಹಳ್ಳಿ ಗ್ರಾಮದ ರೈತ ಬಸವರಾಜು ಆರೋಪಿಸಿದರು
ನಾವೆಲ್ಲರೂ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಬಳಿ ವಾರಕ್ಕೆ ಎರಡೆರಡು ಬಾರಿ ಅಲೆದಾಡಿ ಎಲ್ಲಾ ಇಲಾಖೆಗೂ ಮನವಿ ಪತ್ರ ಸಲ್ಲಿಸಿದರೂ ಯಾರೂ ಕೂಡ ಸ್ಪಂದಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಹೇಳುತ್ತಾರೆ, ಗುತ್ತಿಗೆದಾರರನ್ನು ಕೇಳಿದರೆ ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. ನಾನು ಗುತ್ತಿಗೆದಾರ ಅಷ್ಟೆ, ಇಂಜಿನಿಯರ್ ಸೂಚನೆ ಮೇರೆಗೆ ಉಪಗುತ್ತಿಗೆ ನೀಡಿದ್ದೇನೆ ಎನ್ನುತ್ತಾರೆ. ಆದರೆ ಇವರು ನಮಗೆ ಯಾವುದೇ ವಿದ್ಯುತ್ ಪರಿಕರ ವಿತರಿಸಿಲ್ಲ ಎಂದರು.
ಫಲಾನುಭವಿಗಳ ಪಟ್ಟಿ ಹಿಡಿದು ಅವರಿಗೆ ಕರೆ ಮಾಡಿ ಜಮೀನಿನಲ್ಲಿ ಪಾಯಿಂಟ್ ಮಾಡಿರುವುದನ್ನು ಪರೀಕ್ಷಿಸಲು ಬಂದರು. ಆಗ ಸಣ್ಣ ನೀರಾವರಿ ಇಲಾಖೆಯಿಂದ ಎಲ್ಲರಿಗೂ ಕೊಳವೆಬಾವಿ ಮಂಜೂರು ಮಾಡಿಸಿಕೊಂಡು ಬಂದಿದ್ದು, ಎಲ್ಲರೂ ತಲಾ 25 ಸಾವಿರದಂತೆ ಹಣ ಕೊಟ್ಟರೆ ನಿಮ್ಮ ಜಮೀನಿಗೆ ಬೋರ್‌ವೆಲ್ ಲಾರಿ ಕಳುಹಿಸುತ್ತೇನೆ ಎಂದರು.
ಆಗ ನಾವು ಅವರ ಮಾತು ನಂಬಿ ಶಕ್ತಿ ಅನುಸಾರ 10-25 ಸಾವಿರದ ವರೆಗೂ ಹಣ ನೀಡಿದೆವು. ಅದರಂತೆ ಬೋರ್‌ವೆಲ್ ಕೊರೆಸಿದರು. ಆದರೆ ಈವರೆಗೂ ವಿದ್ಯುತ್ ಸಂಪರ್ಕ ನೀಡಿಲ್ಲ. ಅರಸೀಕೆರೆ ಎಇಇ ವಿಭಾಗದ ಇಂಜಿನಿಯರ್ ಟೆಂಡರ್ ಕ್ಯಾನ್ಸಲ್ ಮಾಡಿ ಬೇರೆಯವರಿಗೆ ನೀಡಿ ನಿಮಗೆ ಮೋಟಾರ್, ಪಂಪ್, ಹಾಗೂ ವಿದ್ಯುತ್ ಸಂಪರ್ಕ ನೀಡುತ್ತೇವೆ ಎಂದು ಹೇಳಿ 6 ತಿಂಗಳಾಯಿತು. ಆದರೂ ಏನೂ ಆಗಿಲ್ಲ ಎಂದು ಅಳಲು ತೋಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಅಣ್ಣಯ್ಯ, ಸಣ್ಣರಾಮು, ಬಸವಯ್ಯ, ಮಂಜುನಾಥ್, ಧರ್ಮ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net