

ಅರಕಲಗೂಡು: ತಾಲೂಕಿನ ರುದ್ರಪಟ್ಟಣದಲ್ಲಿ ಹಮ್ಮಿಕೊಂಡಿರುವ 22ನೇ ಸಂಗೀತೋತ್ಸವದಲ್ಲಿ ಶುಕ್ರವಾರ ಪ್ರಸಿದ್ಧ ಕಲಾವಿದರು ಸಂಗೀತ ಕಚೇರಿ ಪ್ರಸ್ತುತಪಡಿಸಿ ರಾಗಸುಧೆ ಹರಿಸಿ ಪ್ರೇಕ್ಷಕರನ್ನು ರಂಜಿಸಿದರು.
ವಿದ್ವಾನ್ ಚಂದನ್‌ಕುಮಾರ್ ಎರಡು ತಾಸು ನಿರಂತರವಾಗಿ ನುಡಿಸಿದ ಕೊಳಲು ವಾದನದ ನೀನಾದ ಜನರನ್ನು ನಾದಲೋಕದಲ್ಲಿ ತೇಲಿಸಿತು. ಪುರಂದರದಾಸರ ಗಜವದನ ಬೇಡುವೆ, ಮುತ್ತುಸ್ವಾಮಿ ದೀಕ್ಷಿತರ ಅಖಿಲಾಂಡೇಶ್ವರಿ - ದ್ವಿಜಾವಂತಿ ಆದಿತಾಳದಲ್ಲಿ ಹಾಗೂ ಪಿಟೀಲು ಚೌಡಯ್ಯ ಅವರ ಶ್ರೀರಾಮ ಆನಂದಭೈರವಿ ಖಂಡ ಛಾಪು, ತ್ಯಾಗರಾಜರ ವರನಾರದ ವಿಜಯಶ್ರೀ ಆದಿ ತಾಳದಲ್ಲಿ ಮತ್ತು ಮಿಶ್ರ ತ್ರಿಪುಟ ಕಲ್ಯಾಣಿ ರಾಗ-ತಾಳ-ಪಲ್ಲವಿ ನುಡಿಸಿ ಜನಮನಗೆದ್ದರು. ವಿದ್ವಾನ್ ಸಿಂಧು ಪಿಟೀಲು, ವಿದ್ವಾನ್ ಸಿ. ಚೆಲುವರಾಜು ಮೃದಂಗ, ವಿದ್ವಾನ್ ಜಿ.ಎಸ್. ರಾಮಾನುಜನ್ ಘಟಂ ನುಡಿಸಿ ಸಾಥ್ ನೀಡಿದರು.
ವಿದ್ವಾನ್ ಕಾರ್ತಿಕ್ ಮತ್ತೂರು ಅವರು ಎರಡು ತಾಸು ನುಡಿಸಿದ ಗಾಯನಕ್ಕೆ ತಕ್ಕಂತೆ ವಿದ್ವಾನ್ ವಿಶ್ವಜಿತ್ ಮತ್ತೂರು ಪಿಟೀಲು, ವಿದ್ವಾನ್ ಫಣೀಂದ್ರ ಭಾಸ್ಕರ್ ಮೃದಂಗ, ವಿದ್ವಾನ್ ಶ್ರೀನಿಧಿ ಕೌಂಡಿನ್ಯ ಘಟ ನುಡಿಸಿ ಜನರು ತಲೆದೂಗುವಂತೆ ಮಾಡಿದರು.
ವಿದ್ವಾನ್ ವಿಷ್ಣುದೇವ್ ನಂಬೂದರಿ ಅವರ ಎರಡು ತಾಸು ನುಡಿಸಿದ ಗಾಯನಕ್ಕೆ ವಿದ್ವಾನ್ ನಿತೀಶ್ ಚಂದ್ರ ಪಿಟೀಲು, ವಿದ್ವಾನ್ ಕೆ.ಯು. ಜಯಚಂದ್ರರಾವ್ ಮೃದಂಗ, ವಿದ್ವಾನ್ ಶಮಿತ್ ಎಸ್. ಗೌಡ ಘಟಂ ನುಡಿಸಿ ಪ್ರೇಕ್ಷಕರಿಗೆ ಸಂಗೀತದ ರಸದೌತಣ ಉಣಬಡಿಸಿದರು.
ಸಂಗೀತ ಕಚೇರಿ ನಡೆಸಿಕೊಟ್ಟ ಕಲಾವಿದರನ್ನು ವಿದ್ವಾನ್ ಆರ್.ಕೆ. ಪದ್ಮನಾಭ ಅವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.