ಕೊಳಗೇರಿ ನಿವಾಸಿಗಳಿಗೆ ಕಾಲಮಿತಿಯಲ್ಲಿ ಸೂರು

11arsph2ep
ಅರಸೀಕೆರೆ ಇಂದಿರಾನಗರ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ವಸತಿ ಸಂಕೀರ್ಣ ಸ್ಥಳಕ್ಕೆ ಅಧಿಕಾರಿಗಳ ತಂಡದೊಂದಿಗೆ ಸಿ.ಗಿರೀಶ್ ಭೇಟಿ ನೀಡಿ ಪರಿಶೀಲಿಸಿದರು. ಶ್ರೀನಿವಾಸ್, ದರ್ಶನ್ ದಾಸ್, ಮಹದೇವಪ್ಪ, ಸುಮಂತ್ ಇದ್ದರು.
Published on

ಅರಸೀಕೆರೆ: ಕೊಳಗೇರಿ ನಿವಾಸಿಗಳಿಗೆ ನಿಗದಿತ ಕಾಲಮಿತಿಯಲ್ಲಿ ಸೂರು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಹೇಳಿದರು.
ನಗರದ ಇಂದಿರಾನಗರ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ವಸತಿ ಸಂಕೀರ್ಣ ಸ್ಥಳಕ್ಕೆ ಅಧಿಕಾರಿಗಳ ತಂಡದೊಂದಿಗೆ ಮಂಗಳವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಸ್ವಂತ ಮನೆ ಹೊಂದಬೇಕು ಎನ್ನುವ ಬಡವರ ಕನಸು ನನಸಾಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯ ಅನುದಾನ ನೀಡುತ್ತಿವೆ. ಸರಸ್ವತಿಪುರ ಬಡಾವಣೆ ಹಾಗೂ ಹಾಸನ ರಸ್ತೆಗೆ ಹೊಂದಿಕೊಂಡಂತೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆ ನಿರ್ಮಿಸುವ ಕೆಲಸ ಪ್ರಗತಿಯಲ್ಲಿದ್ದು, ನಿಗದಿತ ಕಾಲಮಿತಿಯಲ್ಲಿ ಮನೆ ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ನಗರೋತ್ಥಾನ ಯೋಜನೆಯಡಿ 30 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ರಸ್ತೆ, ಚರಂಡಿ ಸೇರಿ ಎಲ್ಲ ಬಗೆಯ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಗರ ನಿವಾಸಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದೇ ಮೊದಲ ಆದ್ಯತೆಯಾಗಿದೆ. ಹೆಚ್ಚುವರಿ ಅನುದಾನ ತರುವ ನಿಟ್ಟಿನಲ್ಲಿ ಬಿಜೆಪಿ ಮುಖಂಡ ಎನ್.ಆರ್. ಸಂತೋಷ್ ಜತೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದರು. ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ್ ಮುಖಂಡ ದರ್ಶನ್ ದಾಸ್, ಮಂಡಳಿಯ ಎಇಇ ಮಹದೇವಪ್ಪ, ಎಇ ಸುಮಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net