

ಹುಬ್ಬಳ್ಳಿ: ಇಲ್ಲಿಯ ಹೊಸೂರಿನಿಂದ ಆರಂಭವಾಗಿ ಗೋಕುಲ ರಸ್ತೆ, ಸಹದೇವನಗರ, ಹಳೇಹುಬ್ಬಳ್ಳಿ, ಆನಂದನಗರ, ಕಸಬಾಪೇಟ, ಚನ್ನಪೇಟ ಮುಂತಾದ ಪ್ರದೇಶಗಳನ್ನು ಒಳಗೊಂಡ ವಾರ್ಡ್ ನಂಬರ್ 53ರಿಂದ 60ರ ವರೆಗಿನ ಭಾಗದಲ್ಲಿ ಬಹುತೇಕ ಕಡೆ ರಾಜನಾಲಾಗಳ (ರಾಜಕಾಲುವೆ) ದರ್ಶನವಾಗುತ್ತದೆ.
ರಾಜನಾಲಾ ಎಂದರೆ ಕೇಳಬೇಕೆ? ಹುಬ್ಬಳ್ಳಿಯಲ್ಲಿ ಮಳೆ ಬರಲಿ ಬಿಡಲಿ ಇವು ಮಾತ್ರ ಯಾವತ್ತೂ ಹರಿಯುತ್ತವೆ. ಏಕೆಂದರೆ, ಒಳಚರಂಡಿ ಪೈಪ್ಗಳನ್ನು ನೇರವಾಗಿ ಈ ನಾಲೆಗಳಿಗೆ ಸಂಪರ್ಕ ಕಲ್ಪಿಸಿ ಕಲ್ಮಶವನ್ನು ಹರಿಯಬಿಡಲಾಗಿದೆ.
ಮಳೆಗಾಲದಲ್ಲಿ ಒಂದಿಷ್ಟು ನೆರೆ ಬಂದು ನಾಲಾ ಅಕ್ಕಪಕ್ಕದಲ್ಲಿ ಅವಾಂತರ ಸೃಷ್ಟಿಯಾದರೆ, ಉಳಿದ ದಿನಗಳಲ್ಲಿ ಕೊಳಕು ಸಾಗಿಸುತ್ತದೆ. ಗಬ್ಬು ವಾಸನೆ ಎಲ್ಲ ಕಡೆ ಹರಡುತ್ತದೆ. ಇಷ್ಟು ಸಾಲದು ಎಂಬಂತೆ ಅಕ್ಕಪಕ್ಕದ ಜನರು ಕಸವನ್ನು ಅದರಲ್ಲೇ ತಂದು ಹಾಕುತ್ತಾರೆ.
ಈ ಎಲ್ಲ ಕಾರಣಗಳಿಂದ ರಾಜನಾಲಾಗಳು ಎಂದರೆ ಕೊಳಕು ವಾಹಕ ಎಂದೇ ಪರಿಗಣಿತವಾಗಿವೆ. ಹತ್ತಾರು ರೋಗರುಜಿನಗಳ ತಾಣಗಳೂ ಆಗಿವೆ. ಈ ನಾಲಾಗಳು ಒಂದು ವೇಳೆ ಕೊಳಕು ಮುಕ್ತವಾಗಿದ್ದರೆ ಈ ಭಾಗದ ಜನರು ರಾಜರಂತೆ ಬದುಕು ಸಾಗಿಸಬಹುದಿತ್ತು ಎನಿಸುತ್ತದೆ.
‘ಇನ್ನು ಮುಂದೆ ರಾಜಕಾಲುವೆಗಳಲ್ಲಿ ಮಳೆಗಾಲದಲ್ಲಿ ಮಾತ್ರ ಮಳೆ ನೀರಿನಿಂದ ಹರಿಯುತ್ತವೆ. ಉಳಿದ ಸಂದರ್ಭದಲ್ಲಿ ಒಣಗಿರುವಂತೆ ಯೋಜನೆ ರೂಪಿಸಿದ್ದೇವೆ. ಕೆಲವೇ ವರ್ಷದಲ್ಲಿ ಇದು ಸಾಕಾರಗೊಳ್ಳಲಿದೆ’ ಎಂದು ದಶಕದಿಂದ ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು ಹೇಳುತ್ತ ಬಂದಿದ್ದಾರೆ. ಅವರ ಯೋಜನೆಗಳು ಕೇವಲ ದಾಖಲೆಯಲ್ಲಿವೆ ಎಂಬುದನ್ನು ಈ ಎಲ್ಲ ವಾರ್ಡ್ಗಳಲ್ಲಿ ಹಾದು ಹೋದರೆ ಗೊತ್ತಾಗುತ್ತದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಉಣಕಲ್ಲನಿಂದ ನಾಲಾ ಮೇಲೆ ಗ್ರೀನ್ ಮೊಬಿಲಿಟಿ ಕಾರಿಡಾರ್ ಯೋಜನೆ ನಡೆಯುತ್ತಿದ್ದರೂ ಸದ್ಯಕ್ಕೆ ಕೈಗೂಡುವ ಭರವಸೆ ಇಲ್ಲದಂತಾಗಿದೆ. ತೆರೆದ ನಾಲಾಗಳ ಮೇಲೆ ಕಾಂಕ್ರೀಟ್ ಹೊದಿಕೆ ಹಾಕಿ, ವಿವಿಧ ಚಟುವಟಿಕೆಗಳಿಗೆ ಬಳಸುವ ಯೋಜನೆ ಇದಾಗಿದೆ.
ರಸ್ತೆ ಬದಿ ಕಸ: ಇನ್ನು ಈ ವಾರ್ಡ್ಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ಕಸ ವಿಲೇವಾರಿ ಅಷ್ಟೊಂದು ಅಚ್ಚುಕಟ್ಟಾಗಿ ನಡೆಯುತ್ತಿಲ್ಲ. ಇಲ್ಲಿ ಕಸ ಸಂಗ್ರಹಣೆ ವಾಹನ ಬರುತ್ತದಂತೆ. ಆದರೆ, ಹೆಚ್ಚಿನವರು ವಾಹನಕ್ಕೆ ಕಸ ಸುರಿಯುವುದಿಲ್ಲ ಎಂಬುದನ್ನು ರಸ್ತೆ ಬದಿ ಬಿದ್ದಿರುವ ಕಸದ ರಾಶಿಗಳು ಹೇಳುತ್ತವೆ. ನವ ಆನಂದನಗರ, ಆನಂದನಗರ ಮುಖ್ಯರಸ್ತೆ ಅಕ್ಕಪಕ್ಕದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಂಡು ಬರುತ್ತವೆ.
ಕೆಲ ಬಡಾವಣೆಗಳಲ್ಲಿ ಮಾತ್ರ ಸಿಸಿ ರಸ್ತೆ ಮಾಡಲಾಗಿದೆ. ಮುಖ್ಯ ರಸ್ತೆಗಳಿಗೆ ದುರಸ್ತಿ ಭಾಗ್ಯ ಇನ್ನೂ ಸಿಕ್ಕಿಲ್ಲ. ಗಟಾರು, ಒಳಚರಂಡಿ ಕಾಮಗಾರಿಗಳು ಅರ್ಧಂಬರ್ಧ ಆಗಿರುವುದರಿಂದ ಜನ ಸಂಚಾರ ಕಷ್ಟಕರವಾಗಿದೆ.
ಗೋಕುಲ ರಸ್ತೆಗೆ ಹೊಂದಿಕೊಂಡು ಆರ್ಎನ್ ಶೆಟ್ಟಿ ರಸ್ತೆ ಬದಿಯಲ್ಲಿ ವಾರದ ಸಂತೆಯ ಮೈದಾನ ಇದೆ. ಅದು ಮಳೆಗಾಲದಲ್ಲಿ ಕೆಸರುಮಯವಾಗುತ್ತದೆ. ಅಲ್ಲಲ್ಲಿ ಕುಡಿಯುವ ನೀರಿಗಾಗಿ ನಿರ್ವಿುಸಿದ ತೊಟ್ಟಿಗಳು ನಿರ್ವಹಣೆ ಇಲ್ಲದೇ ಸೊರಗಿವೆ.
ಹಂದಿ ನಾಯಿ ಬೀಡು: ಈ ಭಾಗದ ಬಹುತೇಕ ಬಡಾವಣೆಗಳಲ್ಲಿ ಇರುವ ಖಾಲಿ ಸೈಟ್ಗಳು ಹಂದಿ, ನಾಯಿ, ಬಿಡಾಡಿ ದನಗಳ ಬೀಡಾಗಿವೆ. ಹಲವು ವರ್ಷಗಳಿಂದ ಖಾಲಿ ಬಿಟ್ಟಿರುವುದರಿಂದ ಇಲ್ಲಿ ಗಿಡ ಮರ ಬೆಳೆದು ನಿಂತಿವೆ. ಸ್ಥಳೀಯರಿಗೆ ಕಸ ಚೆಲ್ಲಲು ಬಳಕೆಯಾಗುತ್ತಿವೆ. ರಾತ್ರಿಯಾದರೆ ಸಾಕು ಇಲ್ಲಿ ಬೀಡು ಬಿಟ್ಟ ಹಂದಿ, ನಾಯಿಗಳ ಚೀತ್ಕಾರ ಸ್ಥಳೀಯರ ನಿದ್ದೆಗೆಡಿಸುತ್ತವೆ.
ಹಳೇಹುಬ್ಬಳ್ಳಿ ಭಾಗದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಚನ್ನಪೇಟೆ ಅಕ್ಕಪಕ್ಕದಲ್ಲಿ ಒಳ ರಸ್ತೆಗಳು ದುರಸ್ತಿ ಕಂಡಿಲ್ಲ. ಕೆಲವೆಡೆ ಸಾರ್ವಜನಿಕ ಶೌಚಗೃಹ ಇಲ್ಲದೇ ಜನರು ಪರದಾಡುತ್ತಾರೆ. ಇಂತಹ ಹತ್ತು ಹಲವು ಸಮಸ್ಯೆಗಳು ಈ ವಾರ್ಡ್ಗಳಲ್ಲಿ ಎದ್ದು ಕಾಣುತ್ತವೆ.
ಚುನಾವಣೆಯತ್ತ ಚಿತ್ತ: 53ನೇ ವಾರ್ಡ್ಗೆ ಬಿಜೆಪಿಯಿಂದ ಮುಕುಂದಗೌಡ ಗುಗ್ರಿ, ಆಮ್ ಆದ್ಮಿ ಪಾರ್ಟಿಯಿಂದ ಮೋಹನ ಪಾಟೀಲ ಅವರ ಹೆಸರು ಘೋಷಣೆಯಾಗಿವೆ.
54ನೇ ವಾರ್ಡ್ಗೆ ಆಮ್ ಆದ್ಮಿ ಪಾರ್ಟಿಯಿಂದ ಆರತಿ ನರಗುಂದ ಅವರಿಗೆ ಟಿಕೆಟ್ ಘೋಷಣೆಯಾಗಿದೆ.
55ನೇ ವಾರ್ಡ್ಗೆ ಆಪ್ನಿಂದ ನಾರಾಯಣ ಮೊರಬ, ಬಿಜೆಪಿಯಿಂದ ಡಾ. ಪಾಂಡುರಂಗ ಪಾಟೀಲ ಅವರಿಗೆ ಟಿಕೆಟ್ ಘೋಷಣೆಯಾಗಿದೆ. 56ನೇ ವಾರ್ಡ್ಗೆ ಬಿಜೆಪಿಯಿಂದ ಶೋಭಾ ಅಕ್ಕಲಕೋಟಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ.
58ನೇ ವಾರ್ಡ್ಗೆ ಬಿಜೆಪಿಯಿಂದ ಮಹೇಂದ್ರ ಕೌತಾಳರಿಗೆ ಟಿಕೆಟ್ ಘೋಷಣೆಯಾಗಿದೆ. 59ನೇ ವಾರ್ಡ್ಗೆ ಬಿಜೆಪಿಯಿಂದ ಶ್ವೇತಾ ರಾಯನಗೌಡ್ರ ಅವರ ಹೆಸರು ಘೋಷಣೆಯಾಗಿದೆ.
ವಾರ್ಡ್ ವ್ಯಾಪ್ತಿ: ನಾಗಲಿಂಗನಗರ, ಇಂದ್ರಪ್ರಸ್ಥನಗರ, ಅರ್ಜುನ ನಗರ, ಸಹದೇವನಗರ, ನವ ಆನಂದನಗರ, ಗೋಕುಲ ರಸ್ತೆ, ವಿಕಾಸನಗರ, ರಾಜಧಾನಿ ಕಾಲನಿ, ಜೆಪಿ ನಗರ, ಕಾರವಾರ ರಸ್ತೆ, ಹೆಗ್ಗೇರಿ, ಸಿದ್ಧಾರೂಢನಗರ, ಆಯುರ್ವೆದಿಕ ಕಾಲೇಜ್, ಆನಂದನಗರ ರಸ್ತೆ, ಅರವಿಂದನಗರ, ಚನ್ನಪೇಟ, ಹಳೇಹುಬ್ಬಳ್ಳಿ, ಕೃಷ್ಣಾಪುರ, ರಾಮನಗರ ಸ್ಲಂ, ಗಾಂಧಿವಾಡ, ಅರಿಹಂತನಗರ, ಗದಗ ರಸ್ತೆ, ಪಿಂಟೋ ರಸ್ತೆ, ವಸಂತನಗರ, ಕೇಶ್ವಾಪುರ, ಚಾಲುಕ್ಯ ನಗರ, ಚೆನ್ನಪೇಟ, ಕಸಬಾಪೇಟ, ನಾರಾಯಣ ಸೋಫಾ, ಗಾಂಜಿಪೇಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಹಳೇಹುಬ್ಬಳ್ಳಿಯಲ್ಲಿ ಹರಿದಿರುವ ರಾಜನಾಲಾ ಸ್ವಚ್ಛ ಮಾಡಬೇಕು. ಮಳೆಗಾಲದಲ್ಲಿ ಮಾತ್ರ ಹರಿಯು ವಂತಿರಬೇಕು. ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಒಳರಸ್ತೆಗಳನ್ನು ಮೊದಲು ಅಭಿವೃದ್ಧಿಪಡಿಸಬೇಕು.| ಗಣಪತಸಾ ಕಲಬುರ್ಗಿ ಸ್ಥಳೀಯರು