

ಸಿದ್ದಾಪುರ: ಕರಡಿಗೋಡು ಗ್ರಾಮದ ಅವರೆಗುಂದ ಹಾಡಿಯಲ್ಲಿ ಮಾಂಸದ ಊಟಕ್ಕಾಗಿ ಸಹೋದರರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ರಮೇಶ್(36) ಮೃತರು. ಸುರೇಶ (60) ಮತ್ತು ಶಿವಣ್ಣ (48) ಆರೋಪಿಗಳು. ಕರಡಿಗೋಡು ಗ್ರಾಮದ ಅವರೆಗುಂದ ಹಾಡಿ ನಿವಾಸಿ ಗಂಗಮ್ಮ ಎಂಬುವರ ಮನೆಯಲ್ಲಿ ಭಾನುವಾರ ಹಂದಿ ಮಾಂಸದ ಸಾಂಬಾರು ಮಾಡಲಾಗಿತ್ತು. ಈ ವಿಚಾರವಾಗಿ ಕುಡಿದ ಮತ್ತಿನಲ್ಲಿ ರಮೇಶನೊಂದಿಗೆ ಸಹೋದರರಾದ ಸುರೇಶ ಮತ್ತು ಶಿವಣ್ಣ ಜಗಳ ತೆಗೆದು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಈ ವೇಳೆ ಶಿವಣ್ಣ ಮತ್ತು ಸುರೇಶ ಕತ್ತಿಯಿಂದ ರಮೇಶ್ ಮೇಲೆ ಹಲ್ಲೆ ನಡೆಸಿದ್ದು, ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಪರಿಣಾಮ ರಮೇಶ್ ಮೃತಪಟ್ಟಿರುವುದು ಯಾರಿಗೂ ತಿಳಿದಿಲ್ಲ.
ರಕ್ತದ ಮಡುವಿನಲ್ಲಿದ್ದ ರಮೇಶನನ್ನು ಸೋಮವಾರ ಬೆಳಗ್ಗೆ ಕಂಡ ಗಂಗಮ್ಮ ಕೂಡಲೇ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದರು. ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಸುರೇಶ ಮತ್ತು ಶಿವಣ್ಣ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.