ಕೊಲೆಗಾರರಿಬ್ಬರಿಗೆ ಜೀವಾವಧಿ ಶಿಕ್ಷೆ

2f4869ad-7dad-45ca-b94d-d80a9abab338---04
Published on

ಜಿಲ್ಲಾ ಪ್ರಧಾನ ನ್ಯಾಯಾಲಯ ತೀರ್ಪು ಪ್ರಕಟ ಸಾಲ ಕೇಳಿದ್ದಕ್ಕೆ ಹಣ್ಣಿನ ವ್ಯಾಪಾರಿಯನ್ನು ಕೊಂದಿದ್ದ ದುಷ್ಟರು
ಚಿತ್ರದುರ್ಗ: ಸಾಲದ ವಿಚಾರದಲ್ಲಿ ವ್ಯಕ್ತಿಯೊಬ್ಬನ ಕೊಲೆಗೈದಿದ್ದ ಇಬ್ಬರು ಅಪರಾಧಿಗಳಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 30 ಸಾವಿರ ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ಕೊಟ್ಟಿದ್ದ ಸಾಲವನ್ನು ಮರಳಿ ಕೇಳುತ್ತಾ ಜನರೆದುರು ಮರ‌್ಯಾದೆ ತೆಗೆಯುತ್ತಿದ್ದಾನೆಂಬ ಕಾರಣಕ್ಕೆ ಸಂತೆಹೊಂಡದ ಬಳಿಯ ಹಣ್ಣಿನ ವ್ಯಾಪಾರಿ ಸಯ್ಯದ್ ಸಾದತ್‌ನ್ನು ಹತ್ಯೆ ಮಾಡಲಾಗಿತ್ತು.

ಸಾಲ ಪಡೆದಿದ್ದ ನಗರದ ಮುಜಾಹೀದ್ ಬಾಷಾ, ಸಾದತ್‌ನ ಕೊಲೆಗೆ ಸಂಚು ರೂಪಿಸಿದ್ದು, 2022 ಮೇ 4ರಂದು ತಿಪ್ಪಾರೆಡ್ಡಿ ನಗರದ ಬಳಿ ತನ್ನ ಸಹಚರ ಮಹಮದ್ ಷರೀಫ್‌ನೊಂದಿಗೆ ಸೇರಿ ಆಯುಧದಿಂದ ಚುಚ್ಚಿ ತೀವ್ರವಾಗಿ ಗಾಯಗೊಳಿಸಿದ್ದ. ಚಿಕಿತ್ಸೆ ಫಲಿಸದೆ ಗಾಯಾಳು ಸಾದತ್ ದಾವಣಗೆರೆಯಲ್ಲಿ ಮೃತಪಟ್ಟಿದ್ದ. ಕೊಲೆ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದ ಕೋಟೆ ಠಾಣೆ ಸಿಪಿಐ ಬಿ.ವಿ.ಪ್ರಕಾಶ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಪ್ರೇಮಾವತಿ ಎಂ.ಮನಗೂಳಿ ಅವರು, ಅಪರಾಧಿಗಳಾದ ಮುಜಾಹೀದ್ ಬಾಷಾ ಹಾಗೂ ಮಹಮದ್ ಷರೀಫ್‌ಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಹಾಗೂ 3ನೇ ಆರೋಪಿ ಶೇಖ್ ಅಮರ್‌ನನ್ನು ಖುಲಾಸೆಗೊಳಿಸಿ ತೀರ್ಪು ನೀಡಿದರು.

ದಂಡದ ಹಣದಲ್ಲಿ 50 ಸಾವಿರ ರೂ. ಗಳನ್ನು ಸಾದತ್ ತಂದೆಗೆ ಹಾಗೂ ಘಟನೆ ವೇಳೆ ಸಾದತ್ ಜತೆಗಿದ್ದು ಗಾಯಗೊಂಡಿದ್ದ ಮಹಮದ್ ಅಫ್ರೀದಿಗೆ 5 ಸಾವಿರ ರೂ. ಕೊಡುವಂತೆ ಆದೇಶಿಸಿದರು. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಗಣೇಶ ನಾಯಕ್ ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net