

ವಿಜಯಪುರ: ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದಾನೆಂಬ ಕಾರಣಕ್ಕೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದು ಶವವನ್ನು ಸುಟ್ಟುಹಾಕಿರುವ ಪ್ರಕರಣ ಬೇಧಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಸವನಬಾಗೇವಾಡಿಯ ಗಣೇಶ ನಗರ ನಿವಾಸಿ ಡೋಂಗ್ರಿಸಾಬ್ ಬೊಮ್ಮನಳ್ಳಿ (38) ಹಾಗೂ ಜಯಶ್ರೀ ಜಕರಾಯ ದಳವಾಯಿ (34) ಬಂಧಿತ ಆರೋಪಿಗಳು.
ಜಯಶ್ರೀಯ ಪತಿ ಜಕರಾಯ ದಳವಾಯಿ (40) ಅವರನ್ನು ಕೊಲೆ ಮಾಡಲಾಗಿದ್ದು, ಕಳೆದ ಆರು ತಿಂಗಳ (ಫೆಬ್ರವರಿ 22) ಹಿಂದಿನ ಈ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್‌ಪಿ ಎಚ್.ಡಿ. ಆನಂದಕುಮಾರ ಪೊಲೀಸ್ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎಎಸ್‌ಪಿ ಶಂಕರ ಮಾರಿಹಾಳ, ಡಿವೈಎಸ್‌ಪಿ ಜಿ.ಎಚ್. ತಳಕಟ್ಟಿ, ಪಿಐ ಆರ್.ಎಸ್. ಜಾನರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡದಲ್ಲಿ ವಿನೋದ ಪೂಜಾರಿ, ಆರ್.ಎ. ದಿನ್ನಿ ಮತ್ತಿತರರಿದ್ದರು.
ಕಳೆದ 15 ವರ್ಷದ ಹಿಂದೆ ಮದುವೆಯಾಗಿದ್ದ ಜಕರಾಯ-ಜಯಶ್ರೀ ದಂಪತಿಗೆ ಮೂವರು ಮಕ್ಕಳಿದ್ದು, ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಬಡತನದ ಮಧ್ಯೆಯೂ ಜಕರಾಯ ಸ್ವಂತ 407 (ಟೆಂಪೊ) ವಾಹನ ಖರೀದಿಸಿ, ಅದನ್ನು ಓಡಿಸಿಕೊಂಡು ಹೆಂಡತಿ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಸಾಲದ್ದಕ್ಕೆ ಪತ್ನಿ ಕಿರಿಕಿರಿ ಮಾಡಿದಾಗ ಆಕೆಗಾಗಿಯೇ ಬಸವನ ಬಾಗೇವಾಡಿಯಲ್ಲಿ ಮನೆಯೊಂದನ್ನು ಖರೀದಿಸಿ ಕೊಟ್ಟಿದ್ದ.
ಜಯಶ್ರೀ ಮದುವೆ ಮತ್ತಿತರ ಸಮಾರಂಭಗಳಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಳು. ಹೀಗೆ ಅಡುಗೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಇದ್ದ ಡೊಂಗ್ರಿಸಾಬ ಬೊಮ್ಮನಳ್ಳಿ ಎಂಬಾತನೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡಿದ್ದಳು. ಇದು ಗಂಡ ಜಕರಾಯನಿಗೆ ಗೊತ್ತಾದ ಬಳಿಕ ಮನೆಯಲ್ಲಿ ದೊಡ್ಡ ಜಗಳ ನಡೆದಿತ್ತು. ಆತನೊಂದಿಗಿನ ಅನೈತಿಕ ಸಂಬಂಧ ತೊರೆಯುವಂತೆ ಪತ್ನಿಗೆ ತಾಕೀತು ಮಾಡಿದ್ದನಲ್ಲದೆ, ಮಕ್ಕಳನ್ನು ಕರೆದುಕೊಂಡು ಬಸವನಬಾಗೇವಾಡಿಯಿಂದ ತನ್ನೂರಾದ ಹೆಗಡಿಹಾಳಕ್ಕೆ ಹೋಗಿ ವಾಸಿಸುತ್ತಿದ್ದನು.
ಆದರೂ ಕಳೆದ ಫೆಬ್ರವರಿ 22ರಂದು ಹೆಂಡತಿಯನ್ನು ಕಾಣಲು ಬಸವನಬಾಗೇವಾಡಿಗೆ ಜಕರಾಯ ದಳವಾಯಿ ಬಂದಿದ್ದ. ಆಗ ಪತ್ನಿ ಜಯಶ್ರೀ ತನ್ನ ಪ್ರಿಯಕರ ಡೊಂಗ್ರಿಸಾಬನಿಗೆ ಜಕರಾಯ ಬಂದಿರುವ ವಿಷಯ ತಿಳಿಸಿದ್ದಾಳೆ. ಡೊಂಗ್ರಿಸಾಬ್ ಸಮಯ ಸಾಧಿಸಿ ಜಕರಾಯನನ್ನು ಕೊಡಲಿಯಿಂದ ಹೊಡೆದು ಕೊಲೆಮಾಡಿ, ಸಾಕ್ಷಿ ನಾಶಪಡಿಸಲೆಂದು ಜಕರಾಯನ ಶವವನ್ನು ಬಟ್ಟೆಯಲ್ಲಿ ಸುತ್ತಿಕೊಂಡು, ಮೋಟರ್ ಸೈಕಲ್ ಮೇಲೆ ತೆಗೆದುಕೊಂಡು ಹೋಗಿ ಬೆಂಕಿ ಹಚ್ಚಿ ಸುಟ್ಟು ಹಾಕಿ, ಮೂಳೆಗಳನ್ನು ಬಾವಿಯೊಂದರಲ್ಲಿ ಎಸೆದಿದ್ದಾರೆ.
ಕೊಲೆ ಮಾಡಿದ ನಂತರ ಎರಡು ದಿನಗಳ ಬಳಿಕ ಹೆಡಗಿಹಾಳ ಗ್ರಾಮಕ್ಕೆ ಬಂದಿದ್ದ ಜಯಶ್ರೀ ತನ್ನ ಗಂಡ ಜಕರಾಯ ಕೆಲಸಕ್ಕೆ ಹೋಗಿ ಬರ್ತೀನಿ ಎಂದವ ಬಂದಿಲ್ಲ ಎಂದು ಮನೆಯಲ್ಲಿ ನಾಟಕವಾಡಿದ್ದಳು. ಈ ನಾಟಕ ಸತತ 6 ತಿಂಗಳ ಕಾಲ ನಡೆದಿತ್ತು. ಇತ್ತೀಚೆಗೆ ಜಕರಾಯನ ತಂದೆ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದಾಗಲೂ ಅದೆಷ್ಟೇ ಸಾರಿ ಕರೆದು ವಿಚಾರಣೆ ನಡೆಸಿದರೂ ಜಯಶ್ರೀ ನಾಟಕಮಾಡಿ ತಪ್ಪಿಸಿಕೊಂಡಿದ್ದಾಳೆ. ಕೆಲ ದಿನಗಳ ಬಳಿಕ ಜಕರಾಯನ ತಂದೆ ಜಯಶ್ರೀ ಬಳಿ ಹೋದಾಗ ಸತ್ಯಾಂಶ ಬಾಯಿಬಿಟ್ಟಿದ್ದಾಳೆ. ವಿಷಯ ತಿಳಿದ ಪೊಲೀಸರು ಇಬ್ಬರನ್ನೂ ಕರೆ ತಂದು ವಿಚಾರಣೆ ನಡೆಸಲಾಗಿ ನಿಜಾಂಶ ಬಯಲಾಗಿದೆ.