ಕೊಲೆ ಮಾಡಿದವರ ಬಂಧನಕ್ಕೆ ಪಟ್ಟು

mtb
Published on

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಕರ್ನಾಟಕ ಪಬ್ಲಿಕ್ ಶಾಲೆ ಮೈದಾನದಲ್ಲಿ ಶುಕ್ರವಾರ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ಬಂದ ಇಬ್ಬರು ಯುವಕರನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದೊಡ್ಡಬೆಳವಂಗಲ ಗ್ರಾಮಸ್ಥರು ಶನಿವಾರ ದೊಡ್ಡಬೆಳವಂಗಲ ಮತ್ತು ದಾಬಸ್‌ಪೇಟೆ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಆಟದ ಮೈದಾನದ ಬಳಿ ಕಾರು ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆದು ದೊಡ್ಡಬೆಳವಂಗಲ ನಿವಾಸಿ ಭರತ್ (23), ಪ್ರತೀಕ್ (17) ಅವರನ್ನು ಹುಲಿಕುಂಟೆ ಗ್ರಾಮದ ಯುವಕರ ಗುಂಪೊಂದು ಇರಿದು ಪರಾರಿಯಾಗಿತ್ತು. ಯುವಕರು ಆಸ್ಪತ್ರೆಗೆ ಸಾಗಿಸುವ ಅಸುನೀಗಿದ್ದರು.


ಕೊಲೆ ಮಾಡಿ ಒಂದು ದಿನ ಕಳೆದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಲವಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು, ಸ್ಥಳಕ್ಕೆ ಉಸ್ತುವಾರಿ ಸಚಿವರು ಬಂದು ನ್ಯಾಯಕೊಡಿಸಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ಸಚಿವ ಎಂಟಿಬಿ ನಾಗರಾಜ್, ಇಬ್ಬರು ಯುವಕರ ಕೊಲೆ ಮಾಡಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ದೊಡ್ಡಬೆಳವಂಗದಲ್ಲಿ ಇದುವರೆಗೂ ಈ ರೀತಿಯ ಘಟನೆಗಳು ನಡೆದಿರಲಿಲ್ಲ. ಪ್ರಕರಣದಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ. ಎಷ್ಟೇ ಪ್ರಭಾವಿಗಳಿದ್ದರೂ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು. ತಾಲೂಕಿನಲ್ಲಿ ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು. ಮೃತ ಯುವಕರ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ನೆರವು ಕೊಡಿಸಲಾಗುವುದು. ಒಂದು ವೇಳೆ ಸರ್ಕಾರದಿಂದ ಪರಿಹಾರ ನೀಡಲು ಅವಕಾಶ ಇಲ್ಲದಿದ್ದರೆ ನಾವೇ ಪರಿಹಾರ ನೀಡುತ್ತೇವೆ ಎಂದು
ಪ್ರತಿಭಟನಾಕಾರರ ಮನವೊಲಿಸಿದರು. ಗ್ರಾಮಾಂತರ ಜಿಲ್ಲಾ ಎಎಸ್‌ಪಿ ಪುರುಷೋತ್ತಮ್, ಡಿವೈಎಸ್ಪಿ ನಾಗರಾಜ್, ದೊಡ್ಡಬೆಳವಂಗಲ ಇನ್‌ಸ್ಪೆಕ್ಟರ್ ಹರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net