

ಮಂಡ್ಯ : ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತಾಲೂಕಿನ ಕೊಡಿಯಾಲ ಗ್ರಾಮದ ಅಕ್ಷಯ್ ಅಲಿಯಾಸ್ ಬಸವ (24) ಬಂಧಿತ.
ಆರೋಪಿ ಅಕ್ಷಯ್, ಪರಿಚಯವಾಗಿದ್ದ ಶ್ರೀರಂಗಪಟ್ಟಣದ ಕಾವೇರಿಪುರ ಬಡಾವಣೆಯ ಪಾರ್ವತಿ ಎಂಬವರನ್ನು ಇದೇ ಸೆ.7 ರಂದು ಬೈಕಿನಲ್ಲಿ ಸುತ್ತಾಡಿಸಿ, ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಕ್ಷುಲ್ಲಕ ವಿಚಾರಕ್ಕೆ ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಆರೋಪಿ ಅಕ್ಷಯ್, ಪಾರ್ವತಿ ತಲೆಯ ಮೇಲೆ ಕಲ್ಲು ಎತ್ತು ಹಾಕಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದರು.