

ಮೈಸೂರು: ಮೈಸೂರು ತಾಲೂಕಿನ ಬೆಲವತ್ತ ಗ್ರಾಮದಲ್ಲಿ ಬೈಕ್‌ನಲ್ಲಿ ಬಂದು ಹನುಮಂತು (51) ಎಂಬಾತನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ.
ನಗರದ ವಿನೋದ್, ಮೋಹನ್, ಯೋಗ, ಸಂತು, ಆಂಥೋಣಿ, ವೇಣುಗೋಪಾಲ್ ಮತ್ತು ಮಂಜು ಬಂಧಿತರು.
ಡಿ.22ರಂದು ಹನುಮಂತು ಬೈಕ್‌ನಲ್ಲಿ ಹೋಗುತ್ತಿದ್ದರು. ಆಗ ಇನ್ನೊಂದು ಬೈಕ್‌ನಲ್ಲಿ ಬಂದ ಇಬ್ಬರು ಅವರನ್ನು ಅಡ್ಡಗಟ್ಟಿ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದು, ಗಂಭೀರ ಗಾಯಗೊಂಡ ಆತ ಮೃತಪಟ್ಟಿದ್ದರು.
ಡಿ.5ರಂದು ಮಂಜುನಾಥ್ ಮತ್ತು ಹನುಮಂತು ನಡುವೆ ಜಮೀನಿನ ವಿಚಾರವಾಗಿ ಜಗಳವಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಆರ್‌ಟಿಇ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪೊಲೀಸರಿಗೆ ದೂರು ನೀಡಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ವಿಡಿಯೋ ಹಾಗೂ ಹಿಂದೆ ನಡೆದಿದ್ದ ಜಗಳ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು. ಇದರಿಂದ ದೊರೆತ ಸುಳಿವಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ತಲೆಮರೆಸಿಕೊಂಡಿರುವ ಇತರ ಮೂವರು ಆರೋಪಿಗಳ ಬಂಧನಕ್ಕೆ ಶೋಧ ನಡೆದಿದೆ. ಮೇಟಗಳ್ಳಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.