ಕೊಲೆ ಪ್ರಕರಣ ಇಬ್ಬರ ಬಂಧನ

Arrest
Arrest
Published on

ಚಿತ್ರದುರ್ಗ: ಕೊಲೆ ಪ್ರಕರಣ ಸಂಬಂಧ ನಗರದ ಕೋಟೆ ಪೊಲೀಸ್ ಠಾಣೆಯ ಪೊಲೀಸರು ಸೋಮವಾರ ಇಬ್ಬರು ಆರೋಪಿತರನ್ನು ಬಂಧಿಸಿದ್ದಾರೆ.

ಹೊರವಲಯದ ಅಗಸನಕಲ್ಲು ಪ್ರದೇಶದ ಟಿಪ್ಪು ಸರ್ಕಲ್ ಬಳಿಯ ವಾಸಿ ರಹೀಮ್, ಅಗಸನಕಲ್ಲು ಎ.ಕೆ. ಕಾಲಾನಿ ವಾಸಿ ವಿಜಯಕುಮಾರ್ ಆರೋಪಿತರು.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆ ಅಲ್ಲಂಪೇಟೆ ಗ್ರಾಮದ ಬಸವರಾಜ ಬೆವೂರ (35) ಹತ್ಯೆಯಾದವರು.

ಇವರನ್ನು ಮೇ 31ರ ರಾತ್ರಿ 8ರಿಂದ ಜೂ 1ರ ಬೆಳಗ್ಗೆ 7ರ ಮಧ್ಯದ ಅವಧಿಯಲ್ಲಿ ಚಿತ್ರದುರ್ಗ ರೈಲ್ವೆ ವಸತಿ ಗೃಹಗಳ ಹಿಂಭಾಗ ಮುಖಕ್ಕೆ ಸಿಮೆಂಟ್ ಇಟ್ಟಿಗೆಯಿಂದ ಚಚ್ಚಿ ಕೊಲೆ ಮಾಡಲಾಗಿತ್ತು. ಈ ಕುರಿತು ಜೂ 1ರಂದು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿತರ ಪತ್ತೆಗಾಗಿ ಎಸ್ಪಿ ರಂಜಿತ್‌ಕುಮಾರ್ ಬಂಡಾರು, ಎಎಸ್ಪಿ ಎಸ್.ಜೆ.ಕುಮಾರಸ್ವಾಮಿ ಅವರ ಮಾರ್ಗದರ್ಶನ, ಡಿವೈಎಸ್ಪಿ ಪಿ.ಕೆ.ದಿನಕರ್ ಉಸ್ತುವಾರಿಯಲ್ಲಿ ಕೋಟೆ ಠಾಣೆ ಪ್ರಭಾರೆ ಪಿಐ ಜಿ.ಉಮೇಶ್‌ಬಾಬು, ಪಿಎಸ್‌ಐಗಳಾದ ಎಸ್.ಬಸವರಾಜ, ರುಕ್ಕಮ್ಮ, ಸಚಿನ್ ಪಾಟೀಲ್ ಹಾಗೂ ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿತ್ತು. 24 ಗಂಟೆಯೊಳಗೆ ಪತ್ತೆ ಹಚ್ಚಿದ ಪೊಲೀಸರ ಕಾರ್ಯಕ್ಕೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net