ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

11122
Published on

ಪಾಂಡವಪುರ: ತಬ್ಲೀಕ್ ಹಾಗೂ ಸುನ್ನಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆಗೈದಿದ್ದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶ್ರೀರಂಗಪಟ್ಟಣ 3ನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಗೋಪಾಲಕೃಷ್ಣ ರೈ ಗುರುವಾರ ತೀರ್ಪು ಪ್ರಕಟಿಸಿದ್ದಾರೆ.


ಪಟ್ಟಣ ನಿವಾಸಿ ಎ.ಶಹಬುದ್ದೀನ್ ಉರುಫ್ ಲಕ್ಮಾನ್ ಕೊಲೆಯಾದವರು. ಪಟ್ಟಣ ಚಿಕ್ಕಮಸೀದಿ ಬೀದಿ ನಿವಾಸಿಗಳಾದ ಮಹಮ್ಮದ್ ಸುಹೇಲ್ ಬಿನ್ ಲೇಟ್ ಗೌಸ್ ಮಹಮುದ್ದೀನ್ ಕಮ್ಮಾರ್, ವಸೀಂ ಪಾಷ ಬಿನ್ ವಾಜೀದ್ ಪಾಷ ಜೀವಾವಧಿ ಶಿಕ್ಷೆಗೆ ಗುರಿಯಾದವರು.
ಪಟ್ಟಣದ ಬೀರಶೆಟ್ಟಹಳ್ಳಿಯ ಕೆಎಸ್‌ಆರ್‌ಟಿಸಿ ಡಿಪೋ ಸಮೀಪದ ಗ್ಯಾರೇಜ್‌ವೊಂದರ ಮುಂಭಾಗ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ವಿಚಾರವಾಗಿ ತಬ್ಲೀಕ್ ಹಾಗೂ ಸುನ್ನಿ ಪಂಗಡಗಳ ಬೆಂಬಲಿಗರ ನಡುವೆ 2017ರಲ್ಲಿ ನಡೆದಿದ್ದ ಗಲಾಟೆಯಲ್ಲಿ ಅಪರಾಧಿಗಳು ಶಹಬುದ್ದೀನ್‌ರನ್ನು ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದರು.


ಈ ಸಂಬಂಧ ಎ.ಶಹಬುದ್ದೀನ್ ತಂದೆ ಸಲ್ಮಾನ್ ಶರೀಫ್ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಕೆ.ದೀಪಕ್ ನೇತೃತ್ವದಲ್ಲಿ ತನಿಖೆ ನಡೆಸಿ ಇಬ್ಬರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಶ್ರೀರಂಗಪಟ್ಟಣ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಎಂ.ಕೆ.ಪ್ರಫುಲ್ಲಾ ವಾದ ಮಂಡಿಸಿದ್ದರು. ತನಿಖಾಧಿಕಾರಿಗಳಾದ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಕೆ.ದೀಪಕ್ ಮಾರ್ಗದರ್ಶನದಲ್ಲಿ ತನಿಖಾ ಸಹಾಯಕರಾಗಿ ಮುಖ್ಯಪೇದೆಗಳಾದ ಕೆ.ಆರ್.ಸತೀಶ್, ಕೃಷ್ಣೇಗೌಡ, ಶ್ರೀನಿವಾಸ್‌ಮೂರ್ತಿ, ಯೋಗೇಶ್, ಫಯಾಸುದ್ದೀನ್, ಉಮೇಶ್ ಪ್ರಕರಣ ಭೇದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net