ಕೊಲೆ ಆರೋಪಿ ಬಂಧನ

crime
Published on

ಕೊಪ್ಪಳ:ಕಾರಟಗಿ ತಾಲೂಕಿನ ನಾಗನಕಲ್ ಬಳಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ರಾಘವೇಂದ್ರ ರೆಡ್ಡಿಯನ್ನು ಕೊಲೆ ಮಾಡಿರುವುದು ದೃಢಪಟ್ಟಿದ್ದು, ಆರೋಪಿ ಗೌಡಪ್ಪ (ಗರುಡಪ್ಪ) ಬಂಧನವಾಗಿದೆ ಎಂದು ಎಸ್ಪಿ ಯಶೋದಾ ವಂಟಗೋಡಿ ತಿಳಿಸಿದರು.


ಕಳೆದ ಜುಲೈ 31ರಂದು ನಾಗನಕಲ್ ಗ್ರಾಮದ ಬಳಿಯ ಸಿದ್ಧಗಂಗಾ ಬಡಾವಣೆ ಬಳಿ ರಾಘವೇಂದ್ರ ರೆಡ್ಡಿ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಬಂದ ಮಾಹಿತಿ ಪ್ರಕಾರ ಅಪಘಾತವೆಂದು ತಿಳಿಯಲಾಗಿತ್ತು. ಆದರೆ, ಮೃತನ ತಾಯಿ ಹನುಮಂತಮ್ಮ ತಮ್ಮ ಮಗನನ್ನು ಕೊಲೆ ಮಾಡಿರುವುದಾಗಿ ದೂರು ನೀಡಿದ್ದರು. ಪ್ರಕರಣದ ಜಾಡಿ ಹಿಡಿದು ತನಿಖೆ ನಡೆಸಿದಾಗ ಕೊಲೆ ಮಾಡಿರುವುದು ಪತ್ತೆಯಾಗಿದೆ ಎಂದು ಗುರುವಾರ ತಮ್ಮ ಸ್ವಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಹತ್ಯೆಯಾದ ರಾಘವೇಂದ್ರನು ಆರೋಪಿ ಗೌಡಪ್ಪ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಈ ಬಗ್ಗೆ ಎರಡು ಕುಟುಂಬದವರಿಗೆ ಮಾಹಿತಿ ಇದೆ. ಕೊಲೆ ನಡೆದ ದಿನವೂ ಕಾರಟಗಿಯಿಂದ ರಾಘವೇಂದ್ರ ಗೂಡೂರಿಗೆ ತೆರಳುತ್ತಿದ್ದ. ಈ ವಿಷಯ ತಿಳಿದ ಆರೊಪಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸೇರಿ ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಇನ್ನೊಬ್ಬ ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ. ಯಾವುದೇ ಸುಳಿವಿರದ ಪ್ರಕರಣವನ್ನು ಕಡಿಮೆ ಅವಧಿಯಲ್ಲಿ ಪತ್ತೆ ಮಾಡಿದ ನಮ್ಮ ಅಧಿಕಾರಿಗಳ ತಂಡಕ್ಕೆ ಬಹುಮಾನ ವಿತರಿಸಲಾಗುವುದೆಂದರು. ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಕಾರಟಗಿ ಪಿಐ ಸಿದ್ರಾಮಯ್ಯ ಬಿ.ಎಂ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net