ಕೊಲೆ ಆರೋಪ, ಇಬ್ಬರ ಬಂಧನ: ಎಸ್‌ಪಿ

ಕೊಲೆ ಆರೋಪ, ಇಬ್ಬರ ಬಂಧನ: ಎಸ್‌ಪಿ
Published on

ಹಾಸನ: ಮದ್ಯ ಸೇವಿಸಿದ ವಿಷಯವನ್ನು ತಂದೆಗೆ ತಿಳಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಸ್ನೇಹಿತರು ಹಲ್ಲೆ ಮಾಡಿದ್ದರಿಂದ ಆ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.
ಚಿಕ್ಕ ಗೇಣಿಗೆರೆ ಗ್ರಾಮದ ಸ್ನೇಹಿತರಾದ ಪ್ರಕಾಶ್, ಪುನೀತ್, ಯಶ್ವಂತ್ ಮೂವರು ಜುಲೈ 31ರಂದು ಮದ್ಯ ಸೇವಿಸಿದ್ದರು. ಈ ವಿಷಯವನ್ನು ಪ್ರಕಾಶ್ ಪುನೀನ್ ತಂದೆ ರಂಗಸ್ವಾಮಿಗೆ ತಿಳಿಸಿದ್ದರು. ಇದರಿಂದ ಕೋಪಗೊಂಡ ಪುನೀತ್ ಹಾಗೂ ಯಶ್ವಂತ್ ಅದೇ ದಿನ ಸಂಜೆ ಪ್ರಕಾಶ್ ಮನೆಗೆ ತೆರಳಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಆ ನಂತರ ಪ್ರಕಾಶ್ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆರೋಪಿಗಳಾದ ಪುನೀತ್ (18), ಯಶ್ವಂತ್ (19) ಇಬ್ಬರು ತಲೆಮರಿಸಿಕೊಂಡು ಬೆಂಗಳೂರು ಸೇರಿದಂತೆ ನಾನಾ ಭಾಗದಲ್ಲಿ ಸಂಚರಿಸಿದ್ದರು. ನಂತರ ತಾಲೂಕಿನಲ್ಲಿ ಇದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಮ್ಮ ತಂಡ ತೆರಳಿ ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net