ಕೊಲೆ ಆರೋಪಿಗಳ ಬಂಧನ

h10- Ranebennur
Published on

ಹುಬ್ಬಳ್ಳಿ: ಲಾಕ್​ಡೌನ್ ಸಂದರ್ಭದಲ್ಲಿ ಉಂಟಾದ ಕೌಟುಂಬಿಕ ಕಲಹಗಳು ಹಲವು. ಅದರಲ್ಲೂ ಅನೈತಿಕ ಸಂಬಂಧಕ್ಕೆ ಸಂಬಂಧಿಸಿದ್ದವು ಹೆಚ್ಚಾಗಿವೆ. ಇಂತಹದೇ ಪ್ರಕರಣ ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ನಡೆದಿದ್ದು, ಪತ್ನಿಯೊಬ್ಬಳು ಗಂಡನನ್ನೇ ಬಲಿ ಪಡೆದಿದ್ದಾಳೆ.

ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ಸರಹದ್ದಿನ ರಾಣೆಬೆನ್ನೂರ ರೈಲು ನಿಲ್ದಾಣ ಬಳಿ ಕಳೆದ ಮೇನಲ್ಲಿ ಶ್ರೀನಿವಾಸಪುರ ಗಂಗಾಜಲ ತಾಂಡಾದ ಚಂದ್ರಪ್ಪ ಲಮಾಣಿ ಎಂಬುವವರ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ರೈಲ್ವೆ ಪೊಲೀಸರು ಇದೀಗ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ.

ಚಂದ್ರಪ್ಪನ ಪತ್ನಿ ಶೋಭಾ ಹಾಗೂ ದಿಳ್ಳೆಪ್ಪ ಅಂತರವಳ್ಳಿ ಎಂಬುವವರೇ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಶೋಭಾ ಹಾಗೂ ದಿಳ್ಳೆಪ್ಪ ಅವರ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎನ್ನಲಾಗಿದೆ. ಕೂಲಿ ಮಾಡುತ್ತಿದ್ದ ಚಂದ್ರಪ್ಪ 2-3 ತಿಂಗಳು ಕುಟುಂಬದಿಂದ ದೂರ ಇರುತ್ತಿದ್ದ. ಕರೊನಾದಿಂದಾಗಿ ಲಾಕ್​ಡೌನ್ ಘೋಷಣೆಯಾದಾಗ ಚಂದ್ರಪ್ಪ ಮನೆಯಲ್ಲೇ ಇದ್ದ. ತಮ್ಮ ಅನೈತಿಕ ಚಟುವಟಿಕೆಗೆ ಈತ ಅಡ್ಡಿಯಾಗುತ್ತಾನೆಂದು ತಿಳಿದು ಹೊಲದಲ್ಲಿ ಉಸಿರುಗಟ್ಟಿಸಿ ಸಾಯಿಸಿ ನಂತರ ಸಾಕ್ಷಿ ನಾಶ ಪಡಿಸಲು ರೈಲ್ವೆ ಹಳಿ ಮೇಲೆ ತಂದು ಹಾಕಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ರೈಲ್ವೆ ಎಸ್ಪಿ, ಡಿಎಸ್​ಪಿ ಪುಷ್ಪಲತಾ ಅವರ ಮಾರ್ಗದರ್ಶನದಲ್ಲಿ ಸಿಪಿಐ ಜೆ.ಎಂ. ಕಾಲಿಮಿರ್ಚಿ ಹಾಗೂ ತಂಡ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net