ಪತಿಯಿಂದ ಅಂಗನವಾಡಿ ಕಾರ್ಯಕರ್ತೆ ಕೊಲೆ

Published on

ಹೂವಿನಹಡಗಲಿ: ತಾಲೂಕಿನ ಬೀರಬ್ಬಿ ಗ್ರಾಮದ ಅಂಗನವಾಡಿ ಶಿಕ್ಷಕಿಯ ಶೀಲ ಶಂಕಿಸಿ ಆಕೆಯ ಪತಿ ಬುಧವಾರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಗ್ರಾಮದ ಹಾಲಮ್ಮ(33) ಕೊಲೆಯಾದ ಅಂಗನವಾಡಿ ಶಿಕ್ಷಕಿ. ಶಿಕ್ಷಕಿಯ ಗಂಡ ಮಲ್ಲೇಶ(40) ಕೊಲೆಮಾಡಿದ ಆರೋಪಿ. 12 ವರ್ಷಗಳ ಹಿಂದೆ ಹಾವೇರಿ ತಾಲೂಕಿನ ಶಾಕಹಾರದ ಮಲ್ಲೇಶನೊಂದಿಗೆ ಹಾಲಮ್ಮ ಅವರ ವಿವಾಹವಾಗಿತ್ತು. ದಂಪತಿಗಳಿಗೆ 4 ವರ್ಷದ ಗಂಡು ಮಗುವಿದೆ.

ಗ್ರಾಮದಲ್ಲಿ ಕೂಲಿಕೆಲಸ ಮಾಡುತ್ತಿದ್ದ ಮಲ್ಲೇಶ ಆಗಾಗ ಹಾಲಮ್ಮನೊಂದಿಗೆ ಜಗಳವಾಡುತ್ತಿದ್ದ. ಬುಧವಾರ ಬೆಳಗ್ಗೆ ಮನೆಯಲ್ಲಿ ಇಬ್ಬರು ಜಗಳವಾಡಲು ಆರಂಭಿಸಿದ್ದಾರೆ.

ಕೊಪಗೊಂಡ ಮಲ್ಲೇಶ ಹಾಲಮ್ಮನ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಲೆ ಮಾಡಿದ್ದಾನೆ. ನಂತರ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹಿರೇಹಡಗಲಿ ಪೊಲೀಸರು ಭೇಟಿ ನೀಡಿ ಆರೋಪಿ ಮಲ್ಲೇಶನನ್ನು ವಶಕ್ಕೆ ಪಡೆದಿದ್ದಾರೆ. ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net