

ದೇವದುರ್ಗ: ದಲಿತ ಸಮಾಜದ ಕೊರವ, ಕೊರಚ, ಲಂಬಾಣಿ ಹಾಗೂ ಭೋವಿ ಒಳಗೊಂಡ 65 ಜಾತಿಗಳಿಗೆ ಶೇ.7 ಮೀಸಲು ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಪಟ್ಟಣದ ಮಿನಿವಿಧಾನಸೌಧ ಮುಂದೆ ಗೋರಸೇನಾ ಸಂಘಟನೆ ಹಾಗೂ ರಾಜ್ಯ ಭೋವಿ (ವಡ್ಡರ್) ಸಂಘದ ಪದಾಧಿಕಾರಿಗಳು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಲ್ಲಿ ಜಮಾವಣೆಗೊಂಡ ವಿವಿಧ ಸಮಾಜದ ಸಾವಿರಾರು ಕಾರ್ಯಕರ್ತರು ಅಲ್ಲಿಂದ ಮಿನಿವಿಧಾನಸೌಧವರೆಗೆ ರ‌್ಯಾಲಿ ನಡೆಸಿ, ರಾಜ್ಯ ಸರ್ಕಾರ ಕೈಗೊಂಡ ಒಳಮೀಸಲಾತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ :ಅಕ್ಕಿ ಕಳ್ಳರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ರಾಜ್ಯ ಸರ್ಕಾರ ಎಡಬಲಕ್ಕೆ ತಲಾ 6ರಂತೆ ಶೇ.12 ಮೀಸಲು ನೀಡಿದ್ದು ಉಳಿದ 63 ಜಾತಿಗಳಿಗೆ ಕೇವಲ ಶೇ.5 ಮೀಸಲು ಸೌಲಭ್ಯ ನೀಡಲಾಗಿದೆ. ಆದರೆ, ಈ ಮೊದಲು ಶೇ.15 ಮೀಸಲು ಎಲ್ಲರಿಗೂ ನ್ಯಾಯ ಒದಗಿಸಿತ್ತು. ಸರ್ಕಾರ ಯಾವ ಆಧಾರದಲ್ಲಿ ಶೇ.17ಮೀಸಲು ಸೌಲಭ್ಯ ಕಲ್ಪಿಸಿದೆ ಎನ್ನುವುದು ತಿಳಿಯುತ್ತಿಲ್ಲ. ಅಲ್ಲದೆ ಕೆಲ ಸಮಾಜಗಳ ಒತ್ತಡಕ್ಕೆ ಮಣಿದು ನಾಗಮೋಹನ್‌ದಾಸರ ವರದಿ ಅವೈಜ್ಞಾನಿಕವಾಗಿ ಜಾರಿಮಾಡಿ ಜಾತಿ, ಜಾತಿಗಳ ನಡುವೆ ಭೇದಭಾವ ಸೃಷ್ಟಿಸಿದೆ. ಸ್ಪರ್ಶ, ಅಸ್ಪಶ್ಯ ಎನ್ನುವ ಅವೈಜ್ಞಾನಿಕ ಪದಪುಂಜ ಬಳಸಿ ತಾರತಮ್ಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸರ್ಕಾರ ಒಳಮೀಸಲು ವರ್ಗೀಕರಣ ಪರಿಷ್ಕರಿಸಿ 63 ಜಾತಿ ಒಳಗೊಂಡ ಕೊಲಂಭೋ ಸಮಾಜಕ್ಕೆ ಶೇ.7ಮೀಸಲು ನೀಡಬೇಕು. ತಾಂಡಾ, ದೊಡ್ಡಿ, ಗುಡ್ಡಗಾಡು ಪ್ರದೇಶಕ್ಕೆ ಭೇಟಿನೀಡಿ ಅಧ್ಯಯನ ಮಾಡದೆ ನೀಡಲಾದ ಜಾತಿಗಣತಿ ವರದಿ ಕೈಬಿಡಬೇಕು. ವಿಜಯನಗರದಲ್ಲಿ ಹೋರಾಟಗಾರರ ಮೇಲೆ ಹಾಕಿದ ಕೇಸ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ರಮೇಶ ರಾಠೋಡ್, ಬೂದೆಪ್ಪ ರಾಠೋಡ್, ದೇವೇಂದ್ರ ರಾಠೋಡ್, ಶ್ರೀಧರ್ ಚಹ್ವಾನ್, ಸೀತಾರಾಮ್ ರಾಠೋಡ್, ಬಾಸು ರಾಠೋಡ್, ಶಂಕ್ರಪ್ಪ ಪವಾರ್, ರವಿ ಪವಾರ್ ಬಂಡೆಗುಡ್ಡ, ರೆಡ್ಡೆಪ್ಪ ಗೆಜ್ಜೆಬಾವಿ, ನಾಗರಾಜ ಆಲ್ಕೋಡ್, ರಮೇಶ ಗಲಗ, ಬಸವರಾಜ ಮಸರಕಲ್, ಭೀಮಣ್ಣ ಕೊತ್ತದೊಡ್ಡಿ ಇತರರಿದ್ದರು.