

ಹುಮನಾಬಾದ್: ಮಾಣಿಕನಗರದ ಶ್ರೀ ಮಾಣಿಕಪ್ರಭು ದೇವಸ್ಥಾನದಲ್ಲಿ ಶ್ರೀ ಮಾಣಿಕಪ್ರಭುಗಳ ಜಯಂತಿ ನಿಮಿತ್ತ ಸೋಮವಾರ ರಾತ್ರಿಯಿಡೀ ಕೊರೆಯುವ ಚಳಿಯಲ್ಲಿ ನಡೆದ ಖ್ಯಾತ ಸಂಗೀತ ದರ್ಬಾರ್‌ನಲ್ಲಿ ಖ್ಯಾತ ಕಲಾವಿದರು ತಮ್ಮ ಇಂಪಾದ ಧ್ವನಿ ಮೂಲಕ ಸಂಗೀತ ಸುಧೆ ಉಣಬಡಿಸಿದರು.
ಸಂಸ್ಥಾನದ ಪೀಠಾಧಿಪತಿ ಶ್ರೀ ಡಾ.ಜ್ಞಾನರಾಜ ಪ್ರಭು ಪೀಠದಲ್ಲಿ ಆಸೀನರಾದ ಬಳಿಕ ಸಂಸ್ಥಾನದ ಕಾರ್ಯದರ್ಶಿ ಶ್ರೀ ಆನಂದರಾಜ ಪ್ರಭು ಹಾಗು ಶ್ರೀ ಚೈತನ್ಯರಾಜ ಪ್ರಭು ಅವರಿಂದ ಭಜನೆ ಮತ್ತು ಆರತಿ ಪದಗಳೊಂದಿಗೆ ದರ್ಬಾರ್ ಆರಂಭಗೊಂಡಿತು.
ದರ್ಬಾರ್‌ನಲ್ಲಿ ಪ್ರಥಮ ಸಂಗೀತ ಸೇವೆಯನ್ನು ಮಾಣಿಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಸಮೂಹ ಗಾಯನ ಮೂಲಕ ಸಲ್ಲಿಸಿದರು. ನಂತರ ಖ್ಯಾತ ಗಾಯಕ ಸಾತಾರಾದ ಜಾಧವ್ ಬಂಧುಗಳು ಶಹನಾಯಿ ವಾದನ ಪ್ರಸ್ತುತಪಡಿಸಿದರು. ಖ್ಯಾತ ಕಲಾವಿದೆ ಸಂಗೀತಾ ಕಟ್ಟಿ ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಗಾಯನ ನಡೆಸಿಕೊಟ್ಟರು.
ಹೈದರಾಬಾದ್‌ನ ಹೇಮಾಂಗಿ ಭಗತ ನೇನೇ ಶಾಸ್ತ್ರೀಯ ಗಾಯನಕ್ಕೆ ವಿವೇಕ ತಬಲಾ ಹಾಗೂ ರಾಹುಲ್ ದೇಶಪಾಂಡೆ ಹಾರ್ಮೋನಿಯಂ ಸಾಥ್ ನೀಡಿದರು. ದರ್ಬಾರ್ ಸ್ಥಾನಿಕ ಕಲಾವಿದ ಅಜಯ ಸುಗಾಂವಕರ ಅವರಿಂದ ಭೈರವಿ ಸಮರ್ಪಿಸಲಾಯಿತು.
ಖ್ಯಾತ ಕಲಾವಿದರಾದ ಜಯಂತ ಕೇಜಕರ್(ಪುಣೆ) ರಾಗ ಬಸಂತ ಬಹಾರ ಗಾಯನ, ಬೆಂಗಳೂರಿನ ರಮೇಶ ಕುಲಕರ್ಣಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ನಿನಾದ್ ಶುಕ್ಲಾ ಪುಣೆ ಗಾಯನ, ಅನಿಕೇತ ಮುಂಬೈ ಸೀತಾರ ವಾದನ, ಮಂಗೇಶ್ ಬೋರಗಾಂವಕರ್ ಲಾತೂರ, ಅಂಕಿತಾ ಜೋಶಿ ಮುಂಬೈ, ಸೌರಭ ನಾಯಿಕ್ ಮೊದಲಾದವರು ತಮ್ಮ ಮಧುರ ಕಂಠದಿಂದ ಸಂಗೀತ ಸುಧೆ ಹರಿಸಿ ಭಕ್ತಿ ಸೇವೆ ಸಲ್ಲಿಸಿದರು.
ಶೋಭಾಯಾತ್ರೆಯೊಂದಿಗೆ ಜಾತ್ರೆ ಸಂಪನ್ನ: ದರ್ಬಾರ್ ನಂತರ ಶ್ರೀ ಡಾ.ಜ್ಞಾನರಾಜ ಪ್ರಭು ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಬಾಜಾ-ಭಜಂತ್ರಿ ಹಾಗೂ ಭಕ್ತರ ಜೈಘೋಷಗಳ ಮಧ್ಯೆ ವೈಭವದ ನಗರ ಪ್ರದಕ್ಷಿಣೆ ಶೋಭಾಯಾತ್ರೆ ಮೂಲಕ ಮಾಣಿಕಪ್ರಭುಗಳ ಜಾತ್ರೋತ್ಸವ ಸಮಾರೋಪಗೊಂಡಿತು.
ಸ್ವತಃ ಸಂಗೀತಪ್ರಿಯರಾಗಿದ್ದ ಶ್ರೀ ಮಾಣಿಕಪ್ರಭುಗಳ ಕಾಲದಿಂದ ನಡೆದುಕೊಂಡು ಬಂದ ಪರಂಪರೆಯನ್ನು ಸದ್ಯದ ಪೀಠಾಧಿಕಾರಿ ಶ್ರೀ ಡಾ.ಜ್ಞಾನರಾಜ ಪ್ರಭು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಹೀಗೆಯೇ ನೂರಾರು ವರ್ಷಗಳಿಂದ ಸಂಗೀತ ದಿಗ್ಗಜರಿಗೆ ವೇದಿಕೆ ಕಲ್ಪಿಸಿ ಮಾಣಿಕಪ್ರಭು ದೇವಸ್ಥಾನದಲ್ಲಿ ಸಂಗೀತ ಸುಧೆ ಹರಿಸಲಾಗುತ್ತಿದೆ. ದೇಶದ ವಿವಿಧೆಡೆಯ ಖ್ಯಾತ ಕಲಾವಿದರು ದರ್ಬಾರ್‌ನಲ್ಲಿ ಸಂಗೀತ ಸೇವೆ ಸಲ್ಲಿಸಿದ್ದಾರೆ.
| ಆನಂದರಾಜ ಪ್ರಭು ಕಾರ್ಯದರ್ಶಿ, ಮಾಣಿಕಪ್ರಭು ಸಂಸ್ಥಾನ